DAKSHINA KANNADA
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಜಯ; ಮಾಜಿ ಶಾಸಕ ಕೆ ವಿಜಯಕುಮಾರ್ ಶೆಟ್ಟಿ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಬಿಜೆಪಿ ಆಯ್ಕೆಯಾಗುತ್ತಾ ಬಂದಿದ್ದು, ಅಭಿವೃದ್ಧಿ ವಿಚಾರದಲ್ಲಿ ಗಮನಹರಿಸಿದರೆ ಈ ಹಿಂದಿನ ಕಾಂಗ್ರೆಸ್ ಸಂಸದರಾಗಿದ್ದ ಶ್ರೀನಿವಾಸ್ ಮಲ್ಯ ಜನಾರ್ಧನ ಪೂಜಾರಿ ಅವರು ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳಿಗೂ ಈಗಿನ ಬಿಜೆಪಿಯ ಸಂಸದರು ಮಾಡಿರುವ ಕೆಲಸ ಕಾರ್ಯಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.
ಪ್ರತಿಷ್ಠಿತ ನವಮಂಗಳೂರು ಬಂದರು, ಸುರತ್ಕಲ್ ಎನ್ ಐ ಟಿ ಕೆ, ಬಜಪೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬೈಕಂಪಾಡಿ ಕೈಗಾರಿಕಾ ಪ್ರದೇಶ ,ಎಂ ಆರ್ ಪಿ ಎಲ್ ಓ ಎನ್ ಜಿ ಸಿ,ಇದೆಲ್ಲವೂ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಸಂಸದರ ಕೊಡುಗೆಯಾಗಿದೆ.ಹೀಗಾಗಿ ಇಂತಹ ಅಭಿವೃದ್ಧಿ ಪರ ಸರಕಾರ ಹಾಗೂ ಸಂಸದರ ಅಗತ್ಯವಿದ್ದು ಕಾಂಗ್ರೆಸ್‍ನ ಅಭ್ಯರ್ಥಿ ಪದ್ಮರಾಜ್ ಅವರ ಪರ ಒಲವು ಇದೆ ಎಂದು ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ ನುಡಿದರು.
ಮಂಗಳೂರಿನಲ್ಲಿ ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ದೇಶದ ಹಿತಕ್ಕಾಗಿ ಮಾಡಿದ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಬಂದರನ್ನು ಖಾಸಗಿ ಕೈಗಳಿಗೆ ಮಾರಾಟ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ.ಸ್ಥಳೀಯರಿಗೆ ಬೃಹತ್ ಕಂಪನಿಗಳಲ್ಲಿ ಉದ್ಯೋಗ ದೊರಕಿಸಲೂ ಬಿಜೆಪಿ ವಿಫಲವಾಗಿದೆ ಎಂದು ಮಾಜಿ ಶಾಸಕರು ಆರೋಪಿಸಿದ್ದಾರೆ.
ಪಂಪ್ ವೆಲ್ ಸೇತುವೆಗೆ 15 ವರ್ಷ ಪೂರ್ಣಗೊಳಿಸಲು ಬಿಜೆಪಿ ಸಮಯ ತೆಗೆದುಕೊಂಡಿತು.ಪ್ರಮುಖ ಹೆದ್ದಾರಿಗಳು ಕೂಡುವ ನಂತೂರು ಜಂಕ್ಷನ್ ಭಾಗದಲ್ಲಿ ಪ್ರತಿ ದಿನವೂ ವಾಹನ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಸಂಭವಿಸುತ್ತಿದ್ದರೂ, ಇದುವರೆಗೆ ಮೇಲ್ ಸೇತುವೆ ನಿರ್ಮಿಸಲು ಇಲ್ಲಿನ ಬಿಜೆಪಿ ಸಂಸದರಿಗೆ ಸಾಧ್ಯವಾಗಿಲ್ಲ. ಧರ್ಮ ಆಧಾರಿತ ರಾಜಕೀಯ ಮಾಡುತ್ತಾ ಕೋಮು ಸೌಹಾರ್ದತೆಗೆ ದಕ್ಕೆ ತಂದು ಜನರನ್ನ ವಿಭಜಿಸಿ ಮತ ಪಡೆಯುತ್ತಾರೆ ಹೊರತು ಇವರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿ ಇಡೀ ಜಗತ್ತಿಗೆ ಅಹಿಂಸಾ ತತ್ವವನ್ನು ಪರಿಚಯಿಸಿದ ಶ್ರೀರಾಮದೇವರ ಪರಮಭಕ್ತರಾಗಿದ್ದ ಮಹಾತ್ಮ ಗಾಂಧೀಜಿಯವರನ್ನು ಗುಂಡಿಟ್ಟು ಹತ್ಯೆಗೈದ ನಾತುರಾಮ್ ಗೂಡ್ಸೆಗೆ ಮಂದಿರವನ್ನು ಕಟ್ಟಿ, ಪೂಜಿಸುವ ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ
ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವ ಕಾಂಗ್ರೆಸ್ಸಿನ ನೂರಾರು ಮಂದಿ ನೇತಾರರು, ದಿವಂಗತ ಮಹಾತ್ಮ ಗಾಂಧಿ ಇಂದಿರಾಗಾಂಧಿ
ರಾಜೀವ್ ಗಾಂಧಿ ಇವರ ತ್ಯಾಗ ಬಲಿದಾನದಿಂದ ದೇಶ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ. ಯಾವುದೇ ಪ್ರಾಣ ತ್ಯಾಗ ಮಾಡದ ಈ ಬಿಜೆಪಿಯಿಂದ ಅಭಿವೃದ್ಧಿ ಕೇವಲ ಪ್ರಚಾರದಲ್ಲಿ ಆಗುತ್ತಿದೆಯ ಹೊರತು ನೈಜವಾಗಿ ಆಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನಾಯಕರಾದ ಎಸ್.ಟಿ ಸೋಮಶೇಖರ್ ಬಿಜೆಪಿ ಪಕ್ಷಕ್ಕೆ ಹೋಗಿ ಇದೀಗ ಪಶ್ಚಾತಾಪ ಪಡುತ್ತಿದ್ದಾರೆ.ಮೊದಲು ಸಿಹಿ ಕೊಟ್ಟು ಕರೆಸಿಕೊಳ್ಳುವ ಬಿಜೆಪಿ ಬಳಿಕ ವಿಷ ಕೊಡುತ್ತದೆ ಎಂದು ಹೇಳಿದ್ದಾರೆ.ಹೀಗಾಗಿ ಬಿಜೆಪಿಯನ್ನು ಮತದಾರರು ದೂರ ಇಡಬೇಕಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ನಾಯಕರಾದ ಹುಸೈನ್ ಕಾಟಿಪಳ್ಳ ಉಪಸ್ಥಿತರಿದ್ದರು.