LATEST NEWS
ಖಾದರ್ ಬಗ್ಗೆ ಮಾತನಾಡುವ ಯೋಗ್ಯತೆಯೇ ಸತೀಶ್ ಕುಂಪಲಗೆ ಇಲ್ಲ – ಸದಾಶಿವ ಉಳ್ಳಾಲ್

ಮಂಗಳೂರು ಮೇ 07: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅವರು ಯು.ಟಿ.ಖಾದರ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಖಾದರ್ ಬಗ್ಗೆ ಮಾತನಾಡುವ ಯೋಗ್ಯತೆಯೇ ಅವರಿಗಿಲ್ಲ’ ವಿಧಾನಸಭೆ ಚುನಾವಣೆಯಲ್ಲಿ ಸತೀಶ್ ಕುಂಪಲ ಏನು ಮಾಡಿದ್ದರು ಎಲ್ಲರಿಗೂ ಗೊತ್ತಿದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.
‘ಅಪರಾಧ ಕೃತ್ಯದಲ್ಲಿ ಭಾಗಿಯಾದವರಿಗೆ ನೆರವಾಗುವ ಜಾಯಮಾನ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರದಲ್ಲ. ಬಿಜೆಪಿಯವರು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಅವರ ಹೆಸರು ಥಳಕು ಹಾಕಿ ಅಪಪ್ರಚಾರ ಮಾಡುವುದು ಸರಿಯಲ್ಲ’

‘ಸಂತೋಷ್ ಬೊಳಿಯಾರ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸತೀಶ್ ಕುಂಪಲ ಏನು ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಖಾದರ್ ಅವರನ್ನು ಸೋಲಿಸಬೇಕೆಂದು ಎಸ್‌ಡಿಪಿಐ ಜೊತೆ ಒಳ ಒಪ್ಪಂದ ಮಾಡಿಕೊಂಡವರು ಅವರು’ ಎಂದು ಆರೋಪಿಸಿದರು.
ಖಾದರ್ ಜಾತ್ಯತೀತ ನೆಲೆಯಲ್ಲಿ ಎಲ್ಲರಿಗೂ ಸಹಾಯ ಮಾಡುವವರು. ಪೊಲೀಸ್ ಠಾಣೆಗೆ ಕರೆ ಮಾಡಿ ಒತ್ತಡ ಹೇರುವ ಕೆಲಸವನ್ನೂ ಅವರು ಮಾಡುವವರಲ್ಲ. ಸುಹಾಸ್ ಶೆಟ್ಟಿ ಕೊಲೆ ಮಾಡಿದವರಿಗೆ ಶಿಕ್ಷೆ ಆಗಬೇಕೆಂದೇ ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ಆರೋಪಿಸಿದಂತೆ ಪೊಲೀಸರ ಮೇಲೆ ಖಾದರ್ ಒತ್ತಡ ಹೇರುತ್ತಿದ್ದರೆ, ಫಾಝಿಲ್ ಸಹೋದರ ಆದಿಲ್ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುತ್ತಿರಲಿಲ್ಲ’ ಎಂದರು.