LATEST NEWS
ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ದ ಇಡಿ ಚಾರ್ಜ್ ಶೀಟ್ – ಕಾಂಗ್ರೇಸ್ ಪ್ರತಿಭಟನೆ

ಮಂಗಳೂರು ಎಪ್ರಿಲ್ 16: ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರ ನಾಯಕರ ವಿರುದ್ಧ ಇಡಿ ಸುಳ್ಳು ಆರೋಪ ಹೊರಿಸಿ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳೂರಿನ ಜಾರಿ ನಿರ್ದೇಶನಾಲಯ (ಇಡಿ) ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ನಗರದ ಯೆಯ್ಯಾಡಿಯಲ್ಲಿರುವ ಇಡಿ ಕಚೇರಿ ಎದುರು ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಬಿಜೆಪಿ ಸರ್ಕಾರ, ಅಮಿತ್ ಶಾ, ಇಡಿ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಬಳಿಕ ಗೃಹ ಸಚಿವ ಅಮಿತ್ ಶಾ ಭಾವಚಿತ್ರವನ್ನು ಸುಟ್ಟು ಪ್ರತಿಭಟಿಸಿದರು. ಬಳಿಕ ಆಕ್ರೋಶಗೊಂಡ ಪ್ರತಿಭಟನಾಕಾರರು ಇಡಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರೂ ಅಲ್ಲಿದ್ದ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಕೇಂದ್ರದ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ದಬ್ಬಾಳಿಕೆ ನಡೆಸಲು ಹೊರಟಿದೆ, ಅದಕ್ಕೆ ಕಾಂಗ್ರೆಸ್ ದೇಶವ್ಯಾಪಿ ಹೋರಾಟ ಮಾಡುವ ಮೂಲಕ ತಕ್ಕ ಉತ್ತರ ಕೊಟ್ಟಿದ್ದೇವೆ. ಈ ಹಿಂದೆಯೂ ಇಡಿ ಮೂಲಕ ದಾಳಿ ಮಾಡಿಸಿ ಬಿಜೆಪಿಯೇತರ ನಾಯಕರನ್ನು ಹೆದರಿಸುವ ಕೆಲಸ ಮಾಡಿತ್ತು. ಯಾರು ಇಡಿ ಮೇಲೆ ಭಯಪಟ್ಟು ಬಿಜೆಪಿ ಸೇರಿದ್ದಾರೋ ಅವರ ಮೇಲಿನ ಎಲ್ಲ ಕೇಸ್‌ಗಳನ್ನು ಮುಚ್ಚಿ ಹಾಕಲಾಗಿದೆ. ಇಡಿ ದಾಳಿಯ ಭೀತಿಯಿಂದ ಬಿಜೆಪಿ ಸೇರಿದವರು ವಾಷಿಂಗ್ ಮಿಷಿನ್‌ಗೆ ಹಾಕಿದಂತೆ ಸ್ವಚ್ಛ ಆಗುತ್ತಾರೆ ಎಂದು ಲೇವಡಿ ಮಾಡಿದರು. ಕೇಂದ್ರ ಸರ್ಕಾರ ಇಡಿ ಎದುರಿಗಿಟ್ಟು ರಾಜಕೀಯ ನಡೆಸುತ್ತಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮೇಲೆ ಸುಳ್ಳು ದೋಷಾರೋಪ ಪಟ್ಟಿ ಸಲ್ಲಿಸಿರುವುದು ಸಂಪೂರ್ಣ ರಾಜಕೀಯ ಪ್ರೇರಿತ. ಇದರ ವಿರುದ್ಧ ನಾವು ಬೀದಿಗಿಳಿದು ಹೋರಾಟ ನಡೆಸಲಿದ್ದೇವೆ. ಅಗತ್ಯ ಬಿದ್ದರೆ ಪ್ರಾಣ ಕೊಡಲೂ ಸಿದ್ಧ ಎಂದು ರಮಾನಾಥ ರೈ ಗುಡುಗಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಸುಳ್ಳು ದೋಷಾರೋಪ ಪಟ್ಟಿ ಸಲ್ಲಿಸಿರುವುದು ಖಂಡನೀಯ. ಇದರ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.