KARNATAKA
ಹರಿಪ್ರಸಾದ್ ಪರಿಷತ್ತಿಗೆ, ಕಾಂಗ್ರೆಸಿನಿಂದ ಅಚ್ಚರಿಯ ನಡೆ … ಬಿಜೆಪಿಯಿಂದ ಯಾರು ?

ಹರಿಪ್ರಸಾದ್ ಪರಿಷತ್ತಿಗೆ, ಕಾಂಗ್ರೆಸಿನಿಂದ ಅಚ್ಚರಿಯ ನಡೆ … ಬಿಜೆಪಿಯಿಂದ ಯಾರು ?
ಬೆಂಗಳೂರು, ಜೂನ್ 17 : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಮತ್ತು ನಸೀರ್ ಅಹ್ಮದ್ ಅವರನ್ನು ಅಭ್ಯರ್ಥಿಗಳೆಂದು ಕಾಂಗ್ರೆಸ್ ಹೈಕಮಾಂಡ್ ಪ್ರಕಟಿಸಿದೆ. ನಾಲ್ವರ ಹೆಸರನ್ನು ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡಿಗೆ ಶಿಫಾರಸು ಮಾಡಿದ್ದರು. ಆದರೆ, ಕಳೆದ ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೋತಿದ್ದ ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿದ್ದು ಅಚ್ಚರಿ ತಂದಿದೆ.
ಒಡಿಶಾ, ಬಿಹಾರ ಹೀಗೆ ಹಲವು ರಾಜ್ಯಗಳಲ್ಲಿ ಎಐಸಿಸಿ ಉಸ್ತುವಾರಿ ಇನ್ನಿತರ ಕೇಂದ್ರ ಮಟ್ಟದ ಹುದ್ದೆಯಲ್ಲಿದ್ದ ದಕ್ಷಿಣ ಕನ್ನಡ ಮೂಲದ ಹರಿಪ್ರಸಾದ್ ಅವರನ್ನು ರಾಜ್ಯಕ್ಕೆ ತರಲಾಗಿದೆ. ಹರಿಪ್ರಸಾದ್ ಕೇಂದ್ರ ಮಟ್ಟದಲ್ಲಿ ಲಾಬಿ ನಡೆಸಿ ಸೀಟು ದಕ್ಕಿಸಿಕೊಂಡಿದ್ದಾರೆಯೇ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಆಪ್ತನನ್ನು ರಾಜ್ಯಕ್ಕೆ ಕರೆಸಿಕೊಂಡಿದ್ದಾರೆಯೇ ಎನ್ನುವ ಕುತೂಹಲ ಉಂಟಾಗಿದೆ. ಇನ್ನು ನಸೀರ್ ಅಹ್ಮದ್ ಕಳೆದ ಬಾರಿ ಎಂಎಲ್ಸಿ ಆಗಿದ್ದವರು. ಮುಸ್ಲಿಂ ಕೋಟಾದ ನೆಲೆಯಲ್ಲಿ ಮತ್ತೆ ಅವಕಾಶ ಕೊಡಲಾಗಿದೆ.

ಹರಿಪ್ರಸಾದ್ ಅವರನ್ನು ರಾಜ್ಯ ಕಾಂಗ್ರೆಸಿಗೆ ತಂದು ಪಕ್ಷವನ್ನು ಗಟ್ಟಿಗೊಳಿಸುವ ಇರಾದೆ ಹೈಕಮಾಂಡಿನದ್ದು ಎನ್ನಲಾಗುತ್ತಿದೆ. ಬಿಲ್ಲವ ಕೋಟಾದ ಹಿರಿಯ ಮುಖಂಡರಾಗಿರುವ ಹರಿಪ್ರಸಾದ್ ಪಕ್ಷದಲ್ಲಿ ಪ್ರಭಾವಿ ಹೆಸರು. ಆದರೆ, ರಾಷ್ಟ್ರೀಯ ರಾಜಕಾರಣ ಬಿಟ್ಟು ರಾಜ್ಯಕ್ಕೆ ಬಂದಿದ್ದು ಹಿನ್ನಡೆ ಅನ್ನುವ ಭಾವನೆಯೂ ಕಾರ್ಯಕರ್ತರಲ್ಲಿದೆ. ಡಿಕೆಶಿ ಅಧ್ಯಕ್ಷರಾದ ಬಳಿಕ ಅವರ ಆಪ್ತ ವಲಯದಲ್ಲಿ ಬೆಂಗಳೂರಿನಲ್ಲಿ ಗುರುತಿಸಿಕೊಂಡಿದ್ದ ಹರಿಪ್ರಸಾದ್ ಅವರನ್ನು ರಾಜ್ಯದಲ್ಲೇ ಉಳಿಸಲು ಡಿಕೆಶಿ ಕಸರತ್ತು ಮಾಡಿದರೇ ಅನ್ನುವ ಮಾತೂ ಕೇಳಿಬರುತ್ತಿದೆ.
ವಿಧಾನ ಪರಿಷತ್ ಚುನಾವಣೆಯ ನಾಮಪತ್ರಕ್ಕೆ ನಾಳೆ (ಜೂನ್ 18) ಕೊನೆಯ ದಿನವಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ಇನ್ನೂ ಹೆಸರು ಘೋಷಣೆ ಮಾಡಿಲ್ಲ. ಬಿಜೆಪಿಗೆ ನಾಲ್ಕು, ಕಾಂಗ್ರೆಸ್ ಎರಡು ಮತ್ತು ಜೆಡಿಎಸ್ ಒಂದು ಸ್ಥಾನಗಳನ್ನು ಗೆಲ್ಲಲು ಅವಕಾಶವಿದೆ. ಬಿಜೆಪಿಯಲ್ಲಿ ನಾಲ್ಕು ಸ್ಥಾನಗಳಿಗೆ ಡಜನ್ ಗಟ್ಟಲೆ ಆಕಾಂಕ್ಷಿಗಳಿದ್ದು ಅಳೆತು ತೂಗಿ ಆಯ್ಕೆ ಮಾಡುವ ಲೆಕ್ಕಾಚಾರದಲ್ಲಿ ಸಿಎಂ ಯಡಿಯೂರಪ್ಪ ಇದ್ದಾರೆ. ಕಳೆದ ಬಾರಿ ಬಿಜೆಪಿಗೆ ಬಂದಿದ್ದ ಆರ್.ಶಂಕರ್, ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ತಮಗೆ ಸೀಟು ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಮೂವರೂ ಕುರುಬ ಸಮುದಾಯಕ್ಕೆ ಸೇರಿರುವ ಕಾರಣ ಎಲ್ಲರಿಗೂ ಅವಕಾಶ ನೀಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಎಂಟಿಬಿ ಮತ್ತು ಹಳ್ಳಿಹಕ್ಕಿ ವಿಶ್ವನಾಥ್ ಗೆ ಅವಕಾಶ ನೀಡದೆ ಪಕ್ಷಕ್ಕಾಗಿ ದುಡಿದ ಹಿರಿಯರಿಗೆ ಪರಿಷತ್ ಸೀಟು ನೀಡಬೇಕೆಂದು ಬಿಜೆಪಿ ಕಟ್ಟರ್ ವಾದಿಗಳು ವಾದಿಸುತ್ತಿದ್ದಾರೆ. ಇದೇನಿದ್ದರೂ, ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯ ನಾಯಕರಿಗೆ ಶಾಕ್ ನೀಡಿದ್ದ ಹೈಕಮಾಂಡ್ ನಿಲುವಿನಿಂದಾಗಿ ತಮಗೇ ಸಿಗಬೇಕೆಂದು ಪಟ್ಟು ಹಿಡಿಯುವ ಉತ್ಸಾಹದಲ್ಲಿ ಯಾವುದೇ ನಾಯಕರು ಸದ್ಯಕ್ಕೆ ಇಲ್ಲ. ಹೈಕಮಾಂಡ್ ಉತ್ತರಕ್ಕಾಗಿ ಎಲ್ಲರೂ ಕಾದು ನೋಡುತ್ತಿದ್ದಾರೆ