DAKSHINA KANNADA
ಸೆಕ್ಷನ್ ನಡುವೆಯೇ ವಿಜಯೋತ್ಸವ ಆಚರಿಸಿದ ಜೆಡಿಎಸ್-ಕಾಂಗ್ರೇಸ್ ಕಾರ್ಯಕರ್ತರು
ಸೆಕ್ಷನ್ ನಡುವೆಯೇ ವಿಜಯೋತ್ಸವ ಆಚರಿಸಿದ ಜೆಡಿಎಸ್-ಕಾಂಗ್ರೇಸ್ ಕಾರ್ಯಕರ್ತರು
ಮಂಗಳೂರು, ಮೇ 19: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ತಕ್ಷಣವೇ ರಾಜ್ಯದೆಲ್ಲೆಡೆ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ನಡೆಸಿದ್ದಾರೆ.
ಮಂಗಳೂರು ಪೋಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲೂ ಕಾಂಗ್ರೇಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವವನ್ನು ನಡೆಸಿದ್ದು, ಇದಕ್ಕೆ ಪೋಲೀಸರು ಹೇಗೆ ಅನುಮತಿ ಕೊಟ್ಟರು ಎನ್ನುವ ಪ್ರಶ್ನೆಗಳು ಕಾಡತೊಡಗಿದೆ.
ಇಂದು ಮಂಗಳೂರು ಪೋಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದು, ಯಾವುದೇ ಸಂಭ್ರಮಾಚರಣೆಗೂ ಅವಕಾಶವಿಲ್ಲ ಎನ್ನುವ ಆದೇಶವನ್ನು ಮಂಗಳೂರು ಪೋಲೀಸ್ ಕಮಿಷನರ್ ವಿಪುಲ್ ಕುಮಾರ್ ಹೊರಡಿಸಿದ್ದರು.
ಆದರೆ ಕಮಿಷನರ್ ಆದೇಶವನ್ನು ಉಲ್ಲಂಘಿಸಿ ಜೆಡಿಎಸ್ ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದ್ದಾರೆ.
ಬೆಂದೂರುವೆಲ್ ನಲ್ಲಿ ಜೆಡಿಎಸ್ ಕಾರ್ಯಕರ್ತರು ವಾಹನಗಳನ್ನು ತಡೆದು ವಿಜಯೋತ್ಸವವನ್ನು ನಡೆಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೇಸ್-ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುವ ಮುನ್ಸೂಚನೆಯಲ್ಲಿ ಕಾರ್ಯಕರ್ತರು ಈ ವಿಜಯೋತ್ಸವವನ್ನು ಆಚರಿಸಿದರು.
ಕಾನೂನನ್ನು ಉಲ್ಪಂಘಿಸಿ ವಿಜಯೋತ್ಸವ ನಡೆಸಿದ ಜೆಡಿಎಸ್ ಹಾಗೂ ಕಾಂಗ್ರೇಸ್ ಕಾರ್ಯಕರ್ತರ ಮೇಲೆ ಪೋಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.