Connect with us

    DAKSHINA KANNADA

    ‘ಬರ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲ’; ಶಾಸಕ ವೇದವ್ಯಾಸ್ ಕಾಮತ್ ವಾಗ್ದಾಳಿ

    ಮಂಗಳೂರು: ಬರಗಾಲ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದ್ದು, ರೈತರ ಸಂಕಷ್ಟಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್ ವಾಗ್ದಾಳಿ ನಡೆಸಿದರು.

    ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಈ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ತಮ್ಮ ಆಕ್ರೋಶವನ್ನು ಹೊರಹಾಕಲಿದ್ದಾರೆ ಎಂದು ಅವರು ನುಡಿದರು.

    ರಾಜ್ಯದಲ್ಲಿ ಭೀಕರ ಬರಗಾಲವಿದೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬರಗಾಲದಿಂದ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಈ ಹೊತ್ತಿನಲ್ಲಿ ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿ ಮರೆತು, ದೇಶವಿರೋಧಿಗಳನ್ನು ಓಲೈಸುವ ತುಷ್ಟೀಕರಣ ರಾಜಕೀಯವನ್ನೇ ಮಾಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಬೆಂಗಳೂರಿನ ನೀರಿನ ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ. ಕುಡಿಯುವ ನೀರಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಟ್ಯಾಂಕರ್‍‌ಗಳನ್ನು ವಶಪಡಿಸಿಕೊಂಡು ನೀರಿನ ದಂಧೆ ನಡೆಸುತ್ತಿದ್ದಾರೆ ಎಂದು ಶಾಸಕ ಕಾಮತ್ ಆರೋಪಿಸಿದರು.

    ಬೆಂಗಳೂರಿನ ಮಾನ ಹರಾಜು ಹಾಕಿದ ಸರಕಾರ:
    ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವ ಮೊದಲು ಅಳೆದು ತೂಗಿ 3 ತಿಂಗಳು ಕಾಲಹರಣ ಮಾಡಿದರು. ರಾಜ್ಯ ಸರಕಾರದ ಬೊಕ್ಕಸದಲ್ಲಿ ಹಣವಿಲ್ಲದ ಕಾರಣ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಅವೈಜ್ಞಾನಿಕವಾದ, ಅಪ್ರಾಯೋಗಿಕವಾದ ಉಚಿತ ಗ್ಯಾರಂಟಿಗಳ ಪೂರೈಕೆಗೆ ಬೊಕ್ಕಸವನ್ನು ಖಾಲಿ ಮಾಡಿಕೊಂಡು ಇದೀಗ ಬರ ನಿರ್ವಹಣೆಗೆ ಹಣವಿಲ್ಲದಂತಾಗಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾದೆ. ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಇದು ಪ್ರಸಾರವಾಗಿ ಬೆಂಗಳೂರಿನ ಮಾನವನ್ನು ಕಾಂಗ್ರೆಸ್ ಸರಕಾರ ಹರಾಜು ಹಾಕಿದೆ ಎಂದು ಕಾಮತ್ ಟೀಕಿಸಿದರು.

    ಐಟಿ, ಬಿಟಿ ಸಿಟಿ ಎಂಬ ಖ್ಯಾತಿ ಪಡೆದ ಬೆಂಗಳೂರಿಗೆ ಪೂರೈಕೆಯಾಗುವ ಕಾವೇರಿ ನೀರನ್ನೂ ‘ಇಂಡಿ’ ಒಕ್ಕೂಟದ ಭಾಗಿದಾರನೆಂಬ ಕಾರಣಕ್ಕೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅವರ ಕೋರಿಕೆಯಂತೆ ತಮಿಳುನಾಡಿಗೆ ಬಿಟ್ಟಿದ್ದಾರೆ. ಈಗ ಶೇ 60ರಷ್ಟು ಬೋರ್ ವೆಲ್‌ಗಳು ಬತ್ತಿಹೋಗಿವೆ. ದುಷ್ಟ, ರೈತ ವಿರೋಧಿ, ಬಡವರ ವಿರೋಧಿ ಸರಕಾರಕ್ಕೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನತೆ ಉತ್ತರ ಕೊಟ್ಟೇ ಕೊಡುತ್ತಾರೆ ಎಂದು ಶಾಸಕ ಕಾಮತ್ ಹೇಳಿದರು.

    ರೈತ ವಿರೋಧಿ ಕಾಂಗ್ರೆಸ್‌:
    ಬರಗಾಲದಿಂದ ಬೆಳೆ ನಷ್ಟವಾದ ಬಗ್ಗೆ ಈ ವರೆಗೂ ವೈಜ್ಞಾನಿಕ ಸಮೀಕ್ಷೆ ಮಾಡದೆ ರೈತ ವರ್ಗವನ್ನು ಸಂಕಷ್ಟಕ್ಕೆ ದೂಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಸರಕಾರ ಪ್ರತಿ ವರ್ಷ ರೈತರಿಗೆ 6,000 ರೂ ಪ್ರೋತ್ಸಾಹ ಧನ ನೀಡುತ್ತಿದೆ. ಹಿಂದಿನ ಬಿಜೆಪಿ ಸರಕಾರವೂ ಇದೇ ಯೋಜನೆಗೆ 4,000 ರೂ.ಗಳ ಸೇರಿಸಿ, ಒಟ್ಟಾರೆ 10,000 ರೂ.ಗಳನ್ನು ರೈತರಿಗೆ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಇದನ್ನು ಸ್ಥಗಿತಗೊಳಿಸಿದೆ. ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ರೈತ ವಿದ್ಯಾನಿಧಿ ಯೋಜನೆಯನ್ನೂ ಈಗಿನ ಕಾಂಗ್ರೆಸ್ ಸರಕಾರ ನಿಲ್ಲಿಸಿದೆ. ಪ್ರತಿ ಲೀಟರ್ ಹಾಲಿಗೆ 7 ರೂ ಪ್ರೋತ್ಸಾಹಧನ ನೀಡುವುದಾಗಿ ಹೇಳಿದ್ದ ಸರಕಾರ ಈ ವರೆಗೂ ಅದನ್ನು ಈಡೇರಿಸಿಲ್ಲ. ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಸಿ ರೈತರಿಗೆ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಭಾರೀ ಹೊಡೆತ ನೀಡಿದೆ ಎಂದು ಶಾಸಕ ಕಾಮತ್ ವಿವರಿಸಿದರು.

    ರೈತರು ಬೆಳೆದ ಬೆಳೆಗಳ ನಿರ್ವಹಣೆಗೆ, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಉತ್ತೇಜನಕ್ಕಾಗಿ ಹಿಂದಿನ ಬಿಜೆಪಿ ಸರಕಾರ ನೀಡಿದ್ದ 100 ಕೋಟಿ ರೂ ಹಣವನ್ನು ಕಾಂಗ್ರೆಸ್ ಸರಕಾರ ಸ್ಥಗಿತಗೊಳಿಸಿದೆ. 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳ ರೈತರಿಗೆ 180 ಕೋಟಿ ರೂ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ ಜಾರಿ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಅದನ್ನೂ ಸಹ ರದ್ದುಗೊಳಿಸಿದೆ ಎಂದು ಶಾಸಕರು ವಿವರಿಸಿದರು.

    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣೆ ಉಸ್ತುವಾರಿ ನಿತಿನ್ ಕುಮಾರ್, ಜಿಲ್ಲಾ ಬಿಜೆಪಿ ಖಜಾಂಚಿ ಸಂಜಯ ಪ್ರಭು, ಮಾಜಿ ಮೇಯರ್ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಬಿಜೆಪಿ ಮಾಧ್ಯಮ ಕಾರ್ಯದರ್ಶಿ ವಸಂತ ಜೆ ಪೂಜಾರಿ, ಮಾಜಿ ಕಾರ್ಪೊರೇಟರ್ ಭಾಸ್ಕರಚಂದ್ರ ಶೆಟ್ಟಿ ಅವರು ಉಪಸ್ಥಿತರಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *