LATEST NEWS
ಪ್ರಾಣಿಬಲಿ ಪ್ರಕರಣ – ತನಿಖೆಗೆ ಸಹಕರಿಸದ ಪ್ರಸಾದ್ ಅತ್ತಾವರ ಮತ್ತು ಆತನ ಪತ್ನಿ

ಮಂಗಳೂರು ಫೆಬ್ರವರಿ 27: ಸಿಎಂ ಸಿದ್ದರಾಮಯ್ಯ ಅವರ ಮೇಲೆ ಕೇಳಿ ಬಂದಿರುವ ಮೂಡಾ ಹಗರಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ಮತ್ತು ಆರ್‌ಟಿಐ ಕಾರ್ಯಕರ್ತ ಗಂಗರಾಜು ಹಾಗೂ ಇತರ ಮೂವರ ಫೋಟೋಗಳಿಗೆ ವಾಮಾಚಾರ ಮಾಡಿ ಪ್ರಾಣಿ ಬಲಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಳಿಗೆ ಪ್ರಸಾದ್ ಅತ್ತಾವರ ಮತ್ತು ಆತನ ಪತ್ನಿ ಪೊಲೀಸ್ ಅಧಿಕಾರಿ ಸಹಕಾರ ನೀಡುತ್ತಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ವಾಮಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ರಾಮಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ಮತ್ತು ಆತನ ಪತ್ನಿಯಾಗಿರುವ ಉಡುಪಿಯ ಸಬ್ ಇನ್‌ಸ್ಪೆಕ್ಟರ್‌ಗೆ ಎರಡು ಬಾರಿ ನೋಟೀಸ್ ನೀಡಲಾಗಿದೆ. ಆದರೆ ಅವರಿಬ್ಬರೂ ಕೂಡ ತನಿಖೆಗೆ ಸಹಕರಿಸುತ್ತಿಲ್ಲ. ಇನ್ನೊಂದು ನೋಟಿಸ್ ನೀಡಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಬಿಜೈನಲ್ಲಿರುವ ಮಸಾಜ್ ಪಾರ್ಲರ್ ಮೇಲಿನ ದಾಳಿಯಲ್ಲಿ ಬಂಧಿತರಾಗಿದ್ದ ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಅವರ ಮೊಬೈಲ್ ನಲ್ಲಿದ್ದ ವಾಮಾಚಾರದ ಪೋಟೋಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಈ ವಿಚಾರಕ್ಕೆ ಪ್ರಸಾದ್ ಅತ್ತಾವರ ಮತ್ತು ಉಡುಪಿಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿರುವ ಅವರ ಪತ್ನಿ ಗೆ ವಿಚಾರಣೆಗೆ ಬರುವಂತೆ ಪೊಲೀಸರು ನೋಟೀಸ್ ನೀಡಿದ್ದರು, ಆದರೆ ಪ್ರಸಾದ್ ಅತ್ತಾವರ ಜಾಮೀನಿನ ಮೇಲೆ ಬಿಡುಗಡೆಗೊಂಡು ಪೊಲೀಸರ ಕೈಗೆ ಸಿಗದಂತೆ ಓಡಾಡುತ್ತಿದ್ದಾರೆ. ಇನ್ನು ಉಡುಪಿಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿರುವ ಪ್ರಸಾದ್ ಅತ್ತಾವರನ ಪತ್ನಿಗೂ ನೋಟಿಸ್ ನೀಡಲಾಗಿದೆ. ಆಕೆ ರಜೆ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
