DAKSHINA KANNADA
ಜೆರೋಸಾ ಶಾಲಾ ಪ್ರತಿಭಟನೆಯಲ್ಲಿ ಮಕ್ಕಳ ದುರ್ಬಳಕೆ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು: ಕೃಪಾ ಅಮರ್ ಆಳ್ವ

ಮಂಗಳೂರು : ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮ ನಿಂದನೆ ಮಾಡಿದ್ದಾರೆ ಎಂಬ ಪ್ರಕರಣದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಜೊತೆಗೆ ಮಕ್ಕಳನ್ನು ಶಾಲೆಯ ಗೇಟಿನ ಬಳಿ ನಿಲ್ಲಿಸಿ ರಾಜಕೀಯ ಪಕ್ಷದ ನಾಯಕರು ಬಳಸಿಕೊಂಡಿರುವುದು ಖಂಡನೀಯ ಎಂದು ಮಕ್ಕಳ ಹಕ್ಕಿನ ಆಯೋಗದ ಮಾಜಿ ಅಧ್ಯಕ್ಷೆ ಡಾ. ಕೃಪಾ ಅಮರ ಆಳ್ವಾ ಹೇಳಿದರು.
ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಈ ಘಟನೆಯ ಬಗ್ಗೆ ಯಾರು ತಪ್ಪು, ಯಾರು ಸರಿ ಎಂಬ ಕುರಿತು ನಾನು ಮಾತನಾಡುವುದಿಲ್ಲ. ಇದು ಮಕ್ಕಳ ಸ್ವಾತಂತ್ರ್ಯ ಮತ್ತು ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದರು. ಶಾಲಾ ನಿಯಮದ ಪ್ರಕಾರ ಮಕ್ಕಳನ್ನು ಮುಂದಿಟ್ಟು ಶಾಲೆಯ ಅವರಣದೊಳಗೆ ಪ್ರತಿಭಟಿಸುವುದಾಗಲಿ, ಗೇಟ್ ಬಂದ್ ಮಾಡಿ ಅವರನ್ನು ಅಲ್ಲಿಯೇ ತಡೆದು ಪ್ರತಿಭಟಿಸಲು ಬಳಸುವುದು ಅಪರಾಧವಾಗುತ್ತದೆ. ನಾನು ಆಯೋಗದ ಅಧ್ಯಕ್ಷತೆಯಾಗಿದ್ದ ವೇಳೆ ಚುನಾವಣೆಗೆ ಮಕ್ಕಳನ್ನು ಬಳಸುವ ಮತ್ತು ಇಂತಹ ಪ್ರತಿಭಟನೆಗೆ ಬಳಸುವ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಿದ್ದೆ. ಅದೇ ರೀತಿ ಶಾಲಾ ನಿಯಮಗಳ ಪ್ರಕಾರ ಮಕ್ಕಳನ್ನು ಮುಂದಿಟ್ಟು ಶಾಲೆಯ ಆವರಣದೊಳಗೆ ಅಥವಾ ಗೇಟ್ ಬಂದ್ ಮಾಡಿ ಅವರನ್ನು ತಡೆದು ಪ್ರತಿಭಟಿಸಲು ಬಳಸುವುದು ಅಪರಾಧವಾಗಿದೆ. ಆ ಹಿನ್ನೆಲೆಯಲ್ಲಿ ದೂರು ನೀಡಲಾಗಿದ್ದು, ಆಯೋಗವು ಡಿಡಿಪಿಐಯಿಂದ ವರದಿ ಪಡೆದುಕೊಂಡು ಕ್ರಮ ವಹಿಸುವ ನಿರೀಕ್ಷೆ ಇದೆ ಎಂದರು. ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಡಾ. ಮೆಟಿಲ್ಡಾ ಡಿಸೋಜಾ, ಪಾಯಿಸ್ ಉಪಸ್ಥಿತರಿದ್ದರು.
