LATEST NEWS
ಉಡುಪಿ – ಟ್ರಾಫಿಕ್ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ – ಲಾಯರ್ ವಿರುದ್ದ ಪ್ರಕರಣ ದಾಖಲು

ಉಡುಪಿ ಮೇ 18: ನ್ಯಾಯವಾದಿಯೊಬ್ಬರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ ಘಟನೆ ಉಡುಪಿಯಲ್ಲಿ ನಡೆದಿದ್ದು, ಲಾಯರ್ ವಿರುದ್ದ ಪ್ರಕರಣ ದಾಖಲಾಗಿದೆ.
ಮೇ 17ರಂದು ಕರಾವಳಿ ಜಂಕ್ಷನ್ ಫೈ ಓವರ್‌ನಲ್ಲಿ ಸಂಚಾರ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ದುಂಡಪ್ಪ ಮಾದರ ಕರ್ತವ್ಯದಲ್ಲಿದ್ದರು. ಈ ವೇಳೆ ವಾಹನ ಸಂಚಾರ ದಟ್ಟಣೆ ಇದ್ದ ಕಾರಣ ಬನ್ನಂಜೆ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ಬರುವ ವಾಹನಗಳನ್ನು ಕೈ ಸನ್ನೆ ಮೂಲಕ ನಿಲ್ಲಿಸಿದ್ದರು. ಸ್ಕೂಟರ್ ಸವಾರನು ಪೊಲೀಸ್ ಸಿಬಂದಿಯನ್ನು ಉದ್ದೇಶಿಸಿ, “ಯಾಕೆ ವಾಹವನ್ನು ತಡೆದಿದ್ದೀರಿ, ನಾನು ಅಡ್ವಕೇಟ್, ನೀನು ಎಲ್ಲಿಂದಲೋ ಬಂದು ಇಲ್ಲಿ ಕರ್ತವ್ಯ ನಿರ್ವಹಿಸುವ ಆವಶ್ಯಕತೆ ಇಲ್ಲ. ನಮ್ಮ ಜಿಲ್ಲೆಯನ್ನು ನಾವೇ ನೋಡಿಕೊಳ್ಳುತ್ತೇವೆ’ ಎಂದು ಏಕವಚನದಲ್ಲಿ ನಿಂದಿಸಿದ್ದಾನೆ.

ಈ ವೇಳೆ ಪೊಲೀಸ್ ಸಿಬಂದಿ ಪ್ರಶ್ನಿಸಲು ಮುಂದಾದಾಗ ಆರೋಪಿಯು ಸ್ಕೂಟರ್‌ನಿಂದ ಎದ್ದು ಪೊಲೀಸ್ ಸಿಬಂದಿಗೆ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಾನೆ. ಅನಂತರ ಅಲ್ಲಿ ನಿಂತಿದ್ದ ಸ್ಥಳೀಯರಲ್ಲಿ ಆರೋಪಿಯ ಬಗ್ಗೆ ವಿಚಾರಿಸಿದಾಗ ಆತನ ಹೆಸರು ಕೆ. ರಾಜೇಂದ್ರ ಎಂದು ತಿಳಿದು ಬಂದಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.