DAKSHINA KANNADA
ಹೊಂಡ-ಗುಂಡಿಗಳ ಜೊತೆಗೆ ಇದೀಗ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಧೂಳಿನ ಕಾಟ….

ಹೊಂಡ-ಗುಂಡಿಗಳ ಜೊತೆಗೆ ಇದೀಗ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಧೂಳಿನ ಕಾಟ….
ಪುತ್ತೂರು, ಸೆಪ್ಟಂಬರ್ 10: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಯಣ ಮತ್ತೆ ಪ್ರಯಾಸವಾಗಿದೆ. ಮಳೆಯಿಂದಾಗಿ ಬಿ.ಸಿ.ರೋಡ್ ನಿಂದ ಮಾಣಿವರೆಗಿನ ಹೆದ್ದಾರಿಯಲ್ಲಿ ಪ್ರತಿ ವರ್ಷವೂ ಹೊಂಡ-ಗುಂಡಿಗಳ ನಿರ್ಮಾಣ ಸಾಮಾನ್ಯವಾಗಿದೆ.
ಮಳೆಗಾಲ ಮುಗಿಯುವ ತನಕ ಹೆದ್ದಾರಿಯ ಹೊಂಡ- ಗುಂಡಿಗಳಲ್ಲಿ ಎದ್ದು ಬಿದ್ದು ಸಂಚರಿಸಬೇಕಾದದು ಈ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರತಿಯೊಂದು ವಾಹನದ ಜನ್ಮ ಸಿದ್ಧ ಹಕ್ಕು ಎನ್ನುವಂತಾಗಿದೆ.

ಅಸಮರ್ಪಕ ಚರಂಡಿ ವ್ಯವಸ್ಥೆ, ಪ್ರತೀ ಬಾರಿ ಹೊಂಡ ಬೀಳುವ ಜಾಗಕ್ಕೆ ಕಾಂಕ್ರೀಟ್ ಹಾಕಿ ಶಾಶ್ವತ ಪರಿಹಾರ ಕಲ್ಪಿಸುವಲ್ಲ ನಿರಾಸಕ್ತಿಯಿಂದಾಗಿ ಹೆದ್ದಾರಿ ಪ್ರತೀ ಮಳೆಗಾಲದಲ್ಲಿ ಈ ಸ್ಥಿತಿ ತಲುಪುತ್ತದೆ.
ಭಾರೀ ಗಾತ್ರದ ಹೊಂಡಗಳಿಂದ ತುಂಬಿದ್ದ ಹೆದ್ದಾರಿಗೆ ಹೆದ್ದಾರಿ ಇಲಾಖೆ ಇತ್ತೀಚಿಗೆ ಸಣ್ಣ ಜಲ್ಲಿ ಕಲ್ಲುಗಳನ್ನು ಹಾಕಿ ಮುಚ್ಚುವ ಕೆಲಸವನ್ನೆನೋ ಮಾಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ.
ಆದರೆ ಇದೀಗ ಗುಂಡಿಗೆ ಹಾಕಿದ ಜಲ್ಲಿ ಕಲ್ಲುಗಳು ಚದುರಿ ಹೋಗಿವೆ. ಬಹುತೇಕ ಕಡೆಗಳಲ್ಲಿ ಹೆದ್ದಾರಿಯು ಧೂಳುಮಯವಾಗಿದ್ದು, ಪ್ರತಿಯೊಬ್ಬ ಪ್ರಯಾಣಿಕನೂ ಧೂಳು ತಿಂದೇ ಸಾಗಬೇಕಾದ ಸ್ಥಿತಿಯಿದೆ.
ಅಲ್ಲದೆ ಜಲ್ಲಿ ಕಲ್ಲುಗಳು ರಸ್ತೆ ತುಂಬಾ ಹರಡಿ ಸವೆದ ಟಯರ್ ಗಳನ್ನು ಹೊಂದಿರುವ ದ್ವಿಚಕ್ರ ವಾಹನಗಳು ಆಯತಪ್ಪಿ ಬೀಳಲಾರಂಭಿಸಿದೆ.
ಅಲ್ಲಲ್ಲಿ ಹೊಂಡ ಗುಂಡಿಗಳು ತುಂಬಿ ಹೋಗಿರುವುದರಿಂದ ಗುಂಡಿಗಳನ್ನು ತಪ್ಪಿಸುವ ನೆಪದಲ್ಲಿ ವಿರುದ್ಧ ದಿಕ್ಕಿನಲ್ಲಿ ಬಸ್,ಲಾರಿಗಳಂತ ಘನ ವಾಹನಗಳು ದ್ವಿಚಕ್ರ ವಾಹನಗಳ ಮೇಲೆಯೇ ಹರಿದುಬರುವ ಮೂಲಕ ಅಫಘಾತಕ್ಕೂ ಕಾರಣವಾಗುತ್ತಿವೆ
. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೆದ್ದಾರಿಯ ಗುಂಡಿಗಳನ್ನು ಮುಚ್ಚುವಂತೆ ಹೆದ್ದಾರಿ ಇಲಾಖೆಗೆ ಸೂಚಿಸಿದ್ದರೂ ಕೆಲವು ಕಡೆಗಳಲ್ಲಿ ದೊಡ್ಡ ಗುಂಡಿಗಳಿಗೆ ಜಲ್ಲಿ ಕಲ್ಲುಗಳನ್ನು ಹಾಕಲಾಗಿದ್ದು, ಸಣ್ಣ ಗುಂಡಿಗಳನ್ನು ಹಾಗೆಯೇ ಬಿಡಲಾಗಿತ್ತು.
ಇದೀಗ ಸಣ್ಣ ಗುಂಡಿಗಳೂ ಬೃಹದಾಕಾರದಲ್ಲಿ ಬೆಳೆದಿದ್ದು,ವಾಹನ ಚಾಲನೆಗೆ ತೊಂದರೆಯುಂಟಾಗುತ್ತಿದೆ.
ಅಲ್ಲದೆ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಗೂ ಇದು ಕಾರಣವಾಗಿದೆ. ಸಂಸದರ ಪ್ರಕಾರ ಸೆಪ್ಟೆಂಬರ್, ಅಕ್ಟೋಬರ್ ಬಳಿಕವೇ ಹೆದ್ದಾರಿಗೆ ಡಾಮರ್ ಹಾಕಲಾಗುತ್ತದೆ.
ಆದರೆ ಕೇವಲ ಜಲ್ಲಿ ಕಲ್ಲುಗಳನ್ನು ಹಾಕಿದ ಪರಿಣಾಮ ಇದೀಗ ಕೇವಲ ಧೂಳು ಮಾತ್ರ ರಸ್ತೆಯಲ್ಲಿ ಉಳಿದಿದ್ದು, ವಾಹನ ಚಾಲಕರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಭಾರೀ ತೊಂದರೆಯಾಗುತ್ತಿದೆ.