FILM
ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಕಾಮಿಡಿಯನ್ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ

ಯಲ್ಲಾಪುರ, ಆಗಸ್ಟ್ 02 : ಕಾಮಿಡಿ ಕಿಲಾಡಿಗಳು ಶೋ ಮೂಲಕ ಪ್ರೇಕ್ಷಕರನ್ನು ನಕ್ಕು ನಲಿಸಿದ್ದ ಯಲ್ಲಾಪುರ ತಾಲೂಕಿನ ಚಿಮ್ಮಳ್ಳಿ ಗ್ರಾಮದ ಚಂದ್ರಶೇಖರ್ ಸಿದ್ದಿ (31) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಯಲ್ಲಾಪುರ ತಾಲೂಕಿನ ತೆಲಂಗಾರ ವಜ್ರಳ್ಳಿಯ ನಿವಾಸಿಯಾದ ಚಂದ್ರಶೇಖರ್, ಕಬ್ಬಿಗೆ ಗ್ರಾಮಕ್ಕೆ ಪತ್ನಿಯೊಂದಿಗೆ ಕೆಲಸಕ್ಕೆಂದು ಹೋಗಿ ಅಲ್ಲೇ ಉಳಿದುಕೊಂಡಿದ್ದರು. ಶನಿವಾರ (ಜುಲೈ 31) ಮಧ್ಯಾಹ್ನ 2 ಗಂಟೆಗೆ ತನ್ನ ಮಗನನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬಂದಿದ್ದ ಚಂದ್ರಶೇಖರ್, ಬಳಿಕ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವ ಮರಳಿ ಬಂದಿರಲಿಲ್ಲ.

ಆತನ ಪತ್ನಿ ಹುಡುಕಾಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕಳೆದ 2-3 ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಚಂದ್ರಶೇಖರ್ ಸಿದ್ದಿಗೆ ಕಾರವಾರದ ಕ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಚಂದ್ರಶೇಖರ್ ತಾಯಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋನಲ್ಲಿ ಕೆಲ ಕಾಲ ಕಾಣಿಸಿಕೊಂಡಿದ್ದ ಈತ ಜನರನ್ನು ರಂಜಿಸಿ ಗಮನ ಸೆಳೆದಿದ್ದ. ಕೆಲ ಧಾರಾವಾಹಿಗಳಲ್ಲಿಯೂ ಸಹಪಾತ್ರಗಳಲ್ಲಿ ನಟಿಸಿದ್ದರು. ಬಳಿಕ ಹೆಚ್ಚಿನ ಅವಕಾಶಗಳು ಸಿಗದೆ, ಊರಿನ ಕಡೆ ಆಗಮಿಸಿದ್ದ ಚಂದ್ರಶೇಖರ್, ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.