DAKSHINA KANNADA
ಅಂಕಣಕಾರ ನಾ. ಕಾರಂತ ಪೆರಾಜೆಗೆ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪಟ್ಟ
ಅಂಕಣಕಾರ ನಾ. ಕಾರಂತ ಪೆರಾಜೆ ಗೆ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪಟ್ಟ
ಪುತ್ತೂರು,ನವಂಬರ್ 15: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ವತಿಯಿಂದ ಕಡಬದ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಡಿ.16 ರಂದು ನಡೆಯಲಿರುವ 17 ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಂಕಣಕಾರ, ಯಕ್ಷಗಾನ ಕಲಾವಿದ, ಪತ್ರಕರ್ತ ನಾ. ಕಾರಂತ ಪೆರಾಜೆ ಆಯ್ಕೆಯಾಗಿದ್ದಾರೆ. ಯಕ್ಷಗಾನ ಕಲಾವಿದರಾಗಿ, ಪತ್ರಕರ್ತರಾಗಿ ಪರಿಚಿತವಾಗಿರುವ ನಾ.ಕಾರಂತ ಪೆರಾಜೆ ಅವರು ಕೃಷಿ ಪತ್ರಕರ್ತರಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಪ್ರಶಸ್ತಿಯೂ ಲಭಿಸಿದೆ. ಇದೀಗ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‍ನ ವತಿಯಿಂದ ಕಡಬದ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಡಿ.16ರಂದು ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ನಾ. ಕಾರಂತ ಪೆರಾಜೆ ಅವರು ಸುಬ್ರಹ್ಮಣ್ಯ ಕಾರಂತ ಮತ್ತು ಲಕ್ಷ್ಮೀ ಕಾರಂತ್ ಅವರ ಪುತ್ರರಾಗಿ ಸುಳ್ಯ ತಾಲೂಕು ಪೆರಾಜೆಯಲ್ಲಿ 1963 ರಲ್ಲಿ ಜನಿಸಿದರು. 1991ರ ಬಳಿಕ ಪುತ್ತೂರಿನಲ್ಲಿ ವಾಸ ಮಾಡುವುದರೊಂದಿಗೆ, ಕೃಷಿ ಮಾಸಿಕ ಅಡಿಕೆ ಪತ್ರಿಕೆಯಲ್ಲಿ ಕಚೇರಿ ವ್ಯವಸ್ಥಾಪಕರಾಗಿ ಸೇವೆಗೆ ಸೇರ್ಪಡೆಗೊಂಡು ಈಗ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯದ ನಾನಾ ಪತ್ರಿಕೆಗಳಲ್ಲಿ ವ್ಯಕ್ತಿ ಚಿತ್ರ, ವಿಮರ್ಶೆ, ಅವಲೋಕನ, ಸಾಮಾಜಿಕ ನುಡಿಚಿತ್ರ, ಸಮಸಾಮಯಿಕ ಬರಹಗಳ ಮೂಲಕ ಹವ್ಯಾಸಿ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 26 ವರ್ಷಗಳಿಂದ ವೇಷಧಾರಿ, ತಾಳಮದ್ದಳೆ ಅರ್ಥಧಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಎಡನೀರು, ಮಲ್ಲ, ಕೂಡ್ಲು ಮೇಳಗಳಲ್ಲಿ ಹವ್ಯಾಸಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿವಿಧ ಪತ್ರಿಕೆಗಳಲ್ಲಿ ಕೃಷಿ-ಗ್ರಾಮೀಣ ವಿಚಾರದ ನೆಲದ ನಾಡಿ ಎನ್ನುವ ಪಾಕ್ಷಿಕ ಅಂಕಣ, ಕೃಷಿ ಕುರಿತ ಮಾಂಬಳ ಎನ್ನುವ ಪಾಕ್ಷಿಕ ಅಂಕಣ, ಯಕ್ಷಗಾನ ಕುರಿತಾದ ದಧಿ ಗಿಣತೋ.. ಎನ್ನುವ ಸಾಪ್ತಾಹಿಕ ಅಂಕಣಗಳ ಮೂಲಕ ನಾಡಿಗೆ ಪರಿಚಿತರಾಗಿದ್ದಾರೆ.
ತಳಿ ತಪಸ್ವಿ (ಭತ್ತದ ತಳಿ ಸಂಗ್ರಾಹಕ ದೇವರಾವ್ ಕುರಿತು), ಮಾಂಬಳ (ಅಂಕಣ ಬರಹ), ಮನ ಮಿಣುಕು (ನಿತ್ಯ ಬದುಕಿನ ಕಣ್ಣೋಟದಲ್ಲಿ ದಾಖಲಾದ ವಿಚಾರಗಳು), ಮಣ್ಣ ಮಿಡಿತ (ಕೃಷಿ ಸಾಹಿತ್ಯ), ಮಣ್ಣ ಮಾಸು (ಕೃಷಿ ಸಾಹಿತ್ಯ), ಹಸಿರು ಮಾತು (ಕೃಷಿ ಬರಹಗಳ ಸಂಕಲನ), ಕಾಡುಮಾವು (ಕೃಷಿ ಬರಹಗಳ ಸಂಕಲನ), ಎಡ್ವರ್ಡ್ ರೆಬೆಲ್ಲೋ (ತಳಿ ಸಂಗ್ರಾಹಕ), ನೆಲದನಾಡಿ-ಭಾಗ 1, ನೆಲದ ನಾಡಿ-ಭಾಗ 2 (ಅಂಕಣ ಸಂಕಲನ), ಅವಿಲು (ಕಿರು ಬರಹಗಳ ಸಂಗ್ರಹ-ಸಾಧಕರ ಪರಿಚಯಗಳು), ಮೂಲಿಕಾ ತಜ್ಞ ವೆಂಕಟರಾಜ ದೈತೋಟ (ವ್ಯಕ್ತಿ ಪರಿಚಯ), ಜೀವಜಲ (ಅಚ್ಚಿನಲ್ಲಿದೆ) ಒಟ್ಟು 13 ಕೃತಿಗಳು ಇವರಿಂದ ಪ್ರಕಟಗೊಂಡಿವೆ.
ಶೇಣಿ ದರ್ಶನ, ಶೇಣಿ ಚಿಂತನ, ಹಾಸ್ಯಗಾರನ ಅಂತರಂಗ, ಯಕ್ಷ ಕೋಗಿಲೆ, ಅಂತಿಕ, ಸಾಮಗ ಪಡಿದನಿ, ದಗಲೆ, ಬಣ್ಣದ ಬದುಕಿನ ಸ್ವಗತ, ಅಡ್ಡಿಗೆ, ಸುಮನಸ ಮೊದಲಾದ 10 ಯಕ್ಷಗಾನಕ್ಕೆ ಸಂಬಂಧಿಸಿದ ಕೃತಿಗಳು ಬಿಡುಗಡೆಗೊಂಡಿವೆ. ಮಾತ್ರವಲ್ಲದೆ ಪದಯಾನ, ಅಡ್ಕ-ವಚೋಹಾಸ, ಸಾರ್ಥಕ, ಜಾಗರದ ಜೋಷಿ ಸಂಪಾದಿತ ಕೃತಿಗಳು.
ಪ್ರವಾಸ, ಬಾನುಲಿ ಕಾರ್ಯಕ್ರಮ. ಭಾಷಣ, ಉಪನ್ಯಾಸ. ಕೃಷಿಕರ ಸಂದರ್ಶನ ಇವು ಇತರ ಹವ್ಯಾಸಗಳು. ಅವರು ಬರೆದ ಅಕ್ಷರ ಯೋಗಿಯ ನೋಡಲ್ಲಿ (ಹರೇಕಳ ಹಾಜಬ್ಬರು ಶಾಲೆ ಕಟ್ಟಿದ ಸಾಹಸ ಗಾಥೆ) ಬರೆಹವು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯಗಳ ವಾಣಿಜ್ಯ ವಿಭಾಗದ 4ನೇ ಸೆಮಿಸ್ಟರ್‍ನ ಕನ್ನಡ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಊಟದ ಬಟ್ಟಲಿನಲ್ಲಿ ವಿಷ ಎನ್ನುವ ಶೀರ್ಷಿಕೆಯಲ್ಲಿ ರಾಸಾಯನಿಕಗಳ ಘೋರತೆ ಕುರಿತು ಅರಿವನ್ನು ಮೂಡಿಸಲು ಶಾಲೆ, ಕಾಲೇಜು, ಕೃಷಿ ಕಾರ್ಯಕ್ರಮಗಳಲ್ಲಿ ಪವರ್ ಪಾಯಿಂಟ್ ಮೂಲಕ ಉಪನ್ಯಾಸ. ಈಗಾಗಲೇ ಐವತ್ತಕ್ಕೂ ಶಾಲೆ-ಕಾಲೇಜುಗಳಲ್ಲಿ ಉಪನ್ಯಾಸ ನೀಡಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರಾಯೋಜಿತ ರೇಡಿಯೋ ಪಾಂಚಜನ್ಯದಲ್ಲಿ ಕೃಷಿ ಮತ್ತು ಯಕ್ಷಗಾನ ಕುರಿತು ಕಾರ್ಯಕ್ರಮ ನಿರೂಪಣೆಯೊಂದಿಗೆ ಕೃಷಿ, ಪತ್ರಿಕೋದ್ಯಮ, ಯಕ್ಷಗಾನ, ಸಾಹಿತ್ಯ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ.