DAKSHINA KANNADA
ತೆಂಗಿನ ಕಾಯಿ ಕೀಳುವಾಗ ಮರದಿದಂದ ಬಿದ್ದು ಒಂದೇ ಊರಿನ ಇಬ್ಬರು ಯುವಕರ ಸಾವು…!!
ಸುಳ್ಯ ಎಪ್ರಿಲ್ 11 : ತೆಂಗಿನ ಕಾಯಿ ಕೀಳಲು ಮರ ಹತ್ತಿದ ಇಬ್ಬರು ಯುವಕರು ಮರದಿಂದ ಬಿದ್ದು ಸಾವನಪ್ಪಿದ ಪ್ರತ್ಯೇಕ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು ನೆಲ್ಲೂರು ಕೇಮ್ರಾಜೆ ಗ್ರಾಮದ ದಾಸನಕಜೆ ದಿ.ಶಿವರಾಮ ಮಣಿಯಾಣಿ ಅವರ ಪುತ್ರ ಸತೀಶ ಮಣಿಯಾಣಿ (35) ಹಾಗೂ ನೆಲ್ಲೂರು ಕೇಮ್ರಾಜೆ ಗ್ರಾಮದ ನಾರ್ಣಕಜೆ ದಿ.ಕುಂಞ ಎಂಬವರ ಪುತ್ರ ಹರೀಶ್(29) ಎಂದು ಗುರುತಿಸಲಾಗಿದೆ.
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಅಂಬೆಕಲ್ಲು ಬಳಿಯ ಪರ್ಲಡಿ ಎಂಬಲ್ಲಿ ಎಪ್ರಿಲ್ 10 ರಂದು ಮಧ್ಯಾಹ್ನ ತೆಂಗಿನ ಕಾಯಿ ಕೀಳಲು ತೆಂಗಿನ ಮರ ಹತ್ತಿದ್ದ ನೆಲ್ಲೂರು ಕೇಮ್ರಾಜೆ ಗ್ರಾಮದ ದಾಸನಕಜೆ ದಿ.ಶಿವರಾಮ ಮಣಿಯಾಣಿ ಅವರ ಪುತ್ರ ಸತೀಶ ಮಣಿಯಾಣಿ (35) ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಗಾಯಾಳು ಯುವಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹರೀಶ್ ನೆಲ್ಲೂರು ಕೇಮ್ರಾಜೆ ಗ್ರಾಮದ ಬೊಳ್ಳಾಜೆ ಬಳಿಯ ಕಂದೂರು ಎಂಬಲ್ಲಿ ಎಪ್ರಿಲ್ 11ರಂದು ತೆಂಗಿನ ಕಾಯ ಕೀಳಲು ಮರ ಹತ್ತಿ ತೆಂಗಿನಕಾಯಿ ತೆಗೆದು ಇಳಿಯುತ್ತಿದ್ದ ವೇಳೆ ಸ್ಮೃತಿ ತಪ್ಪಿ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.