Connect with us

LATEST NEWS

ಮಂಗಳೂರು – ಸಮುದ್ರದ ಮಧ್ಯೆ ಹೃದಯಾಘಾತಕ್ಕೊಳಗಾದ ಮೀನುಗಾರನ ಜೀವ ಉಳಿಸಿದ ಕೋಸ್ಟ್ ಗಾರ್ಡ್

ಮಂಗಳೂರು ಸೆಪ್ಟೆಂಬರ್ 27: ಸಮುದ್ರದ ಮಧ್ಯೆ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದ ಮೀನುಗಾರನಿಗೆ ಸಮುದ್ರದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವಲ್ಲಿ ಕೋಸ್ಟ್ ಗಾರ್ಡ್ ನೆರವಾಗಿದೆ.


ವಸಂತ ಎನ್ನುವ ಮೀನುಗಾರ ಬೇಬಿ ಮೇರಿ–4 ಎಂಬ ಹೆಸರಿನ ಮೀನುಗಾರಿಕಾ ದೋಣಿಯಲ್ಲಿ ಕಡಲಿಗೆ ತೆರಳಿದ್ದ. ಪಣಂಬೂರು ತೀರದಿಂದ ಸುಮಾರು 36 ನಾಟಿಕಲ್‌ ಮೈಲುಗಳಷ್ಟು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡು, ಉಸಿರಾಟದ ಸಮಸ್ಯೆ ಪ್ರಾರಂಭವಾಗಿದೆ. ಈ ವೇಳೆ ಇದನ್ನು ಗಮನಿಸಿದ ಇನ್ನೊಂದು ಮೀನುಗಾರಿಕಾ ದೋಣಿ ಕರ್ನಾಟಕದ ಕರಾವಳಿ ರಕ್ಷಣಾ ಪಡೆಯ ಜಿಲ್ಲಾ ಕೇಂದ್ರಕ್ಕೆ ಮಾಹಿತಿ ನೀಡಿ ತುರ್ತು ನೆರವು ಕೋರಿದ್ದರು.


ಇದಕ್ಕೆ ಸ್ಪಂದಿಸಿದ ಕರಾವಳಿ ರಕ್ಷಣಾ ಪಡೆಯು ಸಾಗರ ರಕ್ಷಣಾ ಉಪಕೇಂದ್ರವನ್ನು (ಎಂಆರ್‌ಎಸ್‌ಸಿ) ಸನ್ನದ್ಧಗೊಳಿಸಿ, ತನ್ನೆಲ್ಲ ನೌಕೆಗಳಿಗೆ ತುರ್ತು ರಕ್ಷಣೆಯ ಅಗತ್ಯದ ಕುರಿತ ಸಂದೇಶವನ್ನು ಕಳುಹಿಸಿದೆ. ಈ ವೇಳೆ ಈ ದೋಣಿಗೆ ಸಮೀಪದಲ್ಲಿದ್ದ ಕರಾವಳಿ ರಕ್ಷಣಾ ತಡೆಯ ಇಂಟರ್‌ಸೆಪ್ಟರ್‌ ದೋಣಿ ಸಿ– 446, ವಸಂತ ಇದ್ದ ದೋಣಿ ಹತ್ತಿರ ಹೋಗಿ ವಸಂತ ಅವರ ಆರೋಗ್ಯ ತಪಾಸಣೆ ನಡೆಸಿ, ಪ್ರಥಮ ಚಿಕಿತ್ಸೆ ಒದಗಿಸಿದರು. ಹೆಚ್ಚಿನ ಚಿಕಿತ್ಸೆ ಸಲುವಾಗಿ ಆ ಮೀನುಗಾರರನ್ನು ಅದೇ ದೋಣಿಯಲ್ಲಿ ಪಣಂಬೂರಿನ ನವಮಂಗಳೂರು ಬಂದರಿನ ದಕ್ಕೆಗೆ ಕರೆತಂದರು.


ಮೀನುಗಾರಿಕಾ ಇಲಾಖೆ ಹಾಗೂ ನವಮಂಗಳೂರು ಬಂದರು ಪ್ರಾಧಿಕಾರದ ನೆರವಿನಿಂದ ಬಂದರಿನ ಜೆಟ್ಟಿಯಲ್ಲಿ ವಸಂತ ಅವರಿಗೆ ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲಾಯಿತು. ಬಳಿಕ ಮೀನುಗಾರಿಕಾ ದೋಣಿ ಮಾಲೀಕರನ್ನು ಸಂಪರ್ಕಿಸಿದ ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಹೃದಯಾಘಾತಕ್ಕ ಒಳಗಾದ ವ್ಯಕ್ತಿಯನ್ನು ನಗರದ ಬೆಂದೂರುವೆಲ್‌ನ ಎಸ್‌ಸಿಎಸ್‌ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ವೈದ್ಯಕೀಯ ನೆರವು ಒದಗಿಸುವುದಕ್ಕೆ ವ್ಯವಸ್ಥೆ ಕಲ್ಪಿಸಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *