KARNATAKA
ಯುದ್ದ ಬೇಡ ಎಂದು ಪಾಕಿಸ್ತಾನದ ನ್ಯೂಸ್ ಚಾನೆಲ್ ಗಳಲ್ಲಿ ಸುದ್ದಿಯಾದ ಸಿಎಂ ಸಿದ್ದರಾಮಯ್ಯ

ಬೆಂಗಳೂರು ಏಪ್ರಿಲ್ 27: ಪಾಕಿಸ್ತಾನದ ವಿರುದ್ದ ಯುದ್ದ ಬೇಡ, ಶಾಂತಿ ಬೇಕು ಎಂದು ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ಪಾಕಿಸ್ತಾನದ ಮಾಧ್ಯಮಗಳಲ್ಲೂ ಚರ್ಚೆಯಲ್ಲಿದೆ.
ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡಬಾರದು ಎಂದು ಸಿದ್ದರಾಮಯ್ಯನವರು ನೀಡಿದ ಹೇಳಿಕೆಯನ್ನು ಅತ್ತ ಪಾಕಿಸ್ತಾನ ನ್ಯೂಸ್ ಚಾನೆಲ್ ಗಳು ಪ್ರಸಾರ ಮಾಡಿವೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಇದನ್ನೇ ಅಸ್ತ್ರವಾಗಿಸಿಕೊಂಡ ವಿರೋಧ ಪಕ್ಷ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ.
ಏಪ್ರಿಲ್ 26 ಮೈಸೂರಲ್ಲಿ ಪಹಲ್ಗಾಮ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಅಗತ್ಯತೆ ಇಲ್ಲ. ಆದರೆ, ಅನಿವಾರ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪಹಲ್ಗಾಮ್ ಅದೊಂದು ಯಾತ್ರಾರ್ಥಿಗಳ ಸ್ಥಳ. ಅಲ್ಲಿ ಭದ್ರತೆಯನ್ನು ಕೈಗೊಳ್ಳಬೇಕಿತ್ತು. ಈ ಹಿಂದೆ ಪುಲ್ವಾಮಾ ದಾಳಿಯಲ್ಲೂ ಘೋರ ದುರಂತ ಸಂಭವಿಸಿತ್ತು. ಕೇಂದ್ರ ಸರ್ಕಾರವೇ ಭದ್ರತಾ ವೈಫಲ್ಯ ಆಗಿದೆ. ಅದೊಂದು ಇಂಟಲಿಜೆನ್ಸ್ ಹಾಗೂ ಸೆಕ್ಯೂರಿಟಿ ಫೇಲ್ಯೂರ್. ಕೇಂದ್ರ ಸರ್ಕಾರಕ್ಕೆ ಭದ್ರತಾ ಕ್ರಮ ತೆಗೆದುಕೊಂಡಿಲ್ಲ. ಈಗ ಯಾವುದೇ ಕ್ರಮ ತೆಗೆದುಕೊಂಡರೂ 26 ಜನ ವಾಪಸ್ ಬರುವುದಿಲ್ಲ ಎಂದಿದ್ದರು.
ಇನ್ನು ಒದೇ ವೇಳೆ ಪಾಕಿಸ್ತಾನದ ಮೇಲೆ ಯುದ್ಧ ಸಾರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯುದ್ಧದ ಅಗತ್ಯತೆ ಇಲ್ಲ. ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಅಷ್ಟೇ. ಭದ್ರತಾ ವ್ಯಸಸ್ಥೆ ಮಾಡಬೇಕು. ಯುದ್ಧದ ಪರ ನಾವು ಇಲ್ಲ. ಶಾಂತಿ ಇರಬೇಕು. ಜನರಿಗೆ ಭದ್ರತೆ ಇರಬೇಕು. ಕೇಂದ್ರ ಸರ್ಕಾರ ಭದ್ರತಾ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಈ ಹೇಳಿಕೆಯನ್ನು ಪಾಕ್ ಟಿವಿ ಮಾಧ್ಯಮಗಳು ಬ್ರೇಕ್ ನ್ಯೂಸ್ ಆಗಿ ಪ್ರಸಾರ ಮಾಡಿವೆ.

ಇನ್ನು ಸಿದ್ದರಾಮಯ್ಯ ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾಗುವಂತೆ ಹೇಳಿಕೆ ನೀಡಿದ ಬೆನ್ನಲ್ಲೇ ಇತ್ತ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಪಾಕ್ ಟಿವಿ ಪ್ರಸಾರ ಮಾಡಿರುವ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.