BELTHANGADI
ನಾಳೆ ಧರ್ಮಸ್ಥಳಕ್ಕೆ ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ
ನಾಳೆ ಧರ್ಮಸ್ಥಳಕ್ಕೆ ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ
ಮಂಗಳೂರು ಅಕ್ಟೋಬರ್ 23: ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ ವಸ್ತು ಸಂಗ್ರಹಾಲಯವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಾಳೆಉದ್ಘಾಟಿಸಲಿದ್ದಾರೆ.
ಸುಮಾರು 3.50 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಂಗ್ರಹಾಲಯವನ್ನು ನಿರ್ಮಾಣ ಮಾಡಲಾಗಿದ್ದು, ಒಂದು ಲಕ್ಷ ಚದರ ಅಡಿ ವಿಸ್ತೀರ್ಣವನ್ನೂ ಈ ಸಂಗ್ರಹಾಲಯ ಒಳಗೊಂಡಿದೆ. ದೇಶ-ವಿದೇಶಗಳ ಸುಮಾರು 200 ವರ್ಷಗಳ ಪುರಾತನವಾದ ಸಾಮಾಗ್ರಿಗಳು ಈ ಸಂಗ್ರಹಾಲಯದಲ್ಲಿರಲಿದೆ. ಅಲ್ಲದೆ ಸುಮಾರು 50 ವಿವಿಧ ಪ್ರಕಾರದ ತಾಳೆಗರಿಗಳೂ ಈ ಸಂಗ್ರಹಾಲಯದಲ್ಲಿರುವ ವಿಶೇಷತೆಯಾಗಿದೆ.
ಶಿಲಾಯುಗದಿಂದ ಕಲಿಯುಗದ ವರೆಗಿನ ಮನುಷ್ಯ ಆವಿಷ್ಕರಿಸಿರುವ ವಸ್ತುಗಳೂ ಈ ಸಂಗ್ರಹಾಲಯದಲ್ಲಿದೆ. ಅಲ್ಲದೆ ದೇವಸ್ಥಾನಗಳ ಹಳೆಯ ವಿಗ್ರಹಗಳು ಸೇರಿದಂತೆ ನಾನಾ ಪ್ರಕಾರದ ಸಾಮಾಗ್ರಿಗಳನ್ನು ವಸ್ತು ಸಂಗ್ರಹಾಲಯ ಒಳಗೊಂಡಿದ್ದು, ನಾಳೆ ಈ ಸಂಗ್ರಹಾಲಯವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಈ ಸಂಗ್ರಹಾಲಯ ನವಂಬರ್ 15 ರ ಬಳಿಕ ಸಾರ್ವಜನಿಕ ವೀಕ್ಷಣೆಗೆ ತೆರೆಯಲಿದೆ.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆಯವರ ಪಟ್ಟಾಭಿಷೇಕದ ಐವತ್ತನೇ ವರ್ಷಾಚರಣೆ ಕಾರ್ಯಕ್ರಮದಲ್ಲೂ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲ ಪಡೆಯುವ ಪ್ರತಿಯೊಬ್ಬ ಸಾಲಗಾರನ ಹೆಸರಲ್ಲೂ ವಿಮೆ ಮಾಡುವ ಹೊಸ ಯೋಜನೆಯನ್ನೂ ಕ್ಷೇತ್ರದ ವತಿಯಿಂದ ಪರಿಚಯಿಸಲಾಗಿದೆ.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ನೂತನ ಯೋಜನೆಗೆ ಚಾಲನೆಯನ್ನು ನೀಡಲಿದ್ದಾರೆ. ಸ್ವ ಸಹಾಯ ಸಂಘದಿಂದ ಸಾಲ ಪಡೆದುಕೊಂಡ ವ್ಯಕ್ತಿ ಅನಿರೀಕ್ಷಿತವಾಗಿ ಮೃತಪಟ್ಟಲ್ಲಿ ವಿಮೆಯ ಹಣದಿಂದ ಸಂಘಧ ಹಣದ ಮರುಪಾವತಿ ಮಾಡಲಾಗುತ್ತದೆಯಲ್ಲದೆ, ಉಳಿದ ಹಣ ಮೃತನ ಮನೆಗೆ ನೀಡುವ ವ್ಯವಸ್ಥೆಯೂ ಈ ಯೋಜನೆಯಲ್ಲಿದೆ