LATEST NEWS
ದ.ಕ ಜಿಲ್ಲಾ ಆರೋಗ್ಯಾಧಿಕಾರಿಗೆ ಸಿಎಂ ಬೊಮ್ಮಾಯಿ ತರಾಟೆ..ಏನಯ್ಯ, ನೀನ್ ಏನ್ ನಿದ್ದೆ ಮಾಡ್ತಾ ಇದೀಯ ಇಲ್ಲಿ…!!

ಮಂಗಳೂರು ಅಗಸ್ಟ್ 12: ಕೊರೊನಾ ನಿಯಂತ್ರಣಕ್ಕೆ ನಡೆದ ಸಭೆಯಲ್ಲಿ ನೂತನ ಸಿಎಂ ಬಸವರಾಜ್ ಬೊಮ್ಮಾಯಿವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ದ.ಕ. ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತರು ಸೇರಿದಂತೆ ಅರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್, ಮಾಸ್ಕ್ ಹಾಗೂ ಗ್ಲೌಸ್ ಕೊರತೆ ಇದೆ ಎಂದು ಶಾಸಕ ಯು.ಟಿ. ಖಾದರ್ ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಪಿಪಿಇ ಕಿಟ್ ಸಾಕಷ್ಟು ಲಭ್ಯ ಇದೆ. ಗ್ಲೌಸ್ ಮತ್ತು ಎನ್95 ಮಾಸ್ಕ್ ಕೊರತೆ ಇದ್ದು ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದರು. ಇದರಿಂದ ಅಸಮಾಧಾನಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಹಾಗೂ ಆರೋಗ್ಯಾಧಿ ಕಾರಿಯನ್ನು ತರಾಟೆಗೆ ತೆಗೆದುಕೊಂಡರು. ”ಮಾಸ್ಕ್, ಗ್ಲೌಸ್ ಇಲ್ಲದೇ ಏನ್ ಆಡಳಿತ ಮಾಡ್ತೀರಾ ಇಲ್ಲಿ ?, ಆರೋಗ್ಯ ಸಿಬ್ಬಂದಿಗೆ ಬೇಕಾದ ಸವಲತ್ತು ಕೊಡೋಕೆ ನಿಮ್ಮಿಂದ ಆಗಲ್ವಾ ?, ಅಷ್ಟು ಕಾಮನ್ ಸೆನ್ಸ್ ಇಲ್ಲದೇ ಏನ್ರೀ ಮಾಡ್ತೀರಾ ನೀವು ಇಲ್ಲಿ” ಎಂದು ಪ್ರಶ್ನಿಸಿದರು.
ಎಸ್ ಡಿಆರ್ ಎಫ್ ಫಂಡ್ ನಿಂದ ಇವತ್ತೇ ಖರೀದಿ ಮಾಡಿ. ನಿಮ್ಮ ಯಾವುದೇ ಸಮರ್ಥನೆ ನಂಗೆ ಬೇಡ, ಸಂಜೆಯೊಳಗೆ ನಂಗೆ ರಿಪೋರ್ಟ್ ಕೊಡಿ. ಬೆಂಗಳೂರು ಬಿಟ್ಟು ಎಲ್ಲವನ್ನೂ ಇಲ್ಲೇ ಖರೀದಿಸಿ ಸಂಜೆ ನನಗೆ ರಿಪೋರ್ಟ್ ಮಾಡಿ ಎಂದು ಸಿಎಂ ಅವರು ಸೂಚನೆ ನೀಡಿದರು.