BELTHANGADI
ಬೆಳ್ತಂಗಡಿ – ಏಕಾಏಕಿ ಉಕ್ಕಿ ಹರಿದ ಮೃತ್ಯುಂಜಯ ನದಿ…ಪಶ್ಚಿಮಘಟ್ಟದಲ್ಲಿ ಏನಾಗಿದೆ…?

ಬೆಳ್ತಂಗಡಿ ಅಗಸ್ಟ್ 19: ಬೆಳ್ತಂಗಡಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಇಂದು ಸಂಜೆ ಏಕಾಏಕಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಇಲ್ಲದೆಯೂ ಇದ್ದಕ್ಕಿದ್ದ ಹಾಗೆ ಮೃತ್ಯುಂಜಯ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಶ್ಚಿಮಘಟ್ಟದಲ್ಲಿ ಭಾರೀ ಮಳೆಯ ಕಾರಣದಿಂದ ಮೃತ್ಯುಂಜಯ ನದಿ ಉಕ್ಕಿಹರಿಯುತ್ತಿದೆ ಎಂದು ಹೇಳಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಕಡಿಮೆಯಾಗಿದೆ. ಮಳೆ ಇಲ್ಲದ ಹೆಚ್ಚಾಗಿ ಬಿಸಿಲಿನ ವಾತಾವರಣ ಜಿಲ್ಲೆಯಲ್ಲಿ ಇದ್ದು, ಜಿಲ್ಲೆಯ ಜೀವನದಿಗಳು ಶಾಂತವಾಗಿ ಹರಿಯುತ್ತಿವೆ. ಆದೆರ ಇಂದು ಮಧ್ಯಾಹ್ನದ ನಂತರ ಬೆಳ್ತಂಗಡಿಯಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಏಕಾಏಕಿ ಮೃತ್ಯುಂಜಯ ನದಿ ಉಕ್ಕಿಹರಿಯಲು ಪ್ರಾರಂಭಿಸಿದೆ. ಚಾರ್ಮಾಡಿ- ಕೊಳಂಬೆ ಸಂಪರ್ಕಿಸುವ ರಸ್ತೆಯೂ ಜಲಾವೃತವಾಗಿದೆ.
ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು ಮೊದಲಾದ ಗ್ರಾಮಗಳ ಕಡೆ ಹೆಚ್ಚಿನ ತೋಟಗಳಿಗೆ ಪ್ರವಾಹದ ನೀರು ನುಗ್ಗಿ ಕಡಿರುದ್ಯಾವರದಿಂದ 10 ಕಿಮಿ ದೂರದಲ್ಲಿರುವ ಬಂಡಾಜೆ ಜಲಪಾತಜಲಪಾತ ತುಂಬಿ ಹರಿಯುವ ದೃಶ್ಯ ಕಡಿರುದ್ಯಾವರದಲ್ಲಿ ಗೋಚರಿಸುತ್ತಿತ್ತು.

ನೀರಿನೊಂದಿಗೆ ಅಪಾರ ಪ್ರಮಾಣದ ಮರಮಟ್ಟುಗಳು ತೇಲಿಬರುತ್ತಿರುವ ದೃಶ್ಯ ನೋಡಿದರೆ ಪಶ್ಚಿಮ ಘಟ್ಟದ ದಟ್ಟಾರಣ್ಯದ ನಡುವೆ ಎಲ್ಲಿಯೂ ಭೂ ಕುಸಿತವಾಗಿದೆ ಎಂಬ ಸಂಶಯ ಉಂಟಾಗಿದೆ.
2019 ರಲ್ಲಿ ಮೃತ್ಯುಂಜಯ ಹೊಳೆಯ ಪ್ರವಾಹ ರೂಪದಲ್ಲಿ ಹರಿದು ಹಲವು ಮನೆಗಳು ಕೊಚ್ಚಿ ಹೋಗಿತ್ತು, ಇಂದು ಮತ್ತೆ ಏಕಾಏಕಿ ಹೊಳೆ ಉಕ್ಕಿ ಹರಿದ ಕಾರಣ ನದಿ ಪಾತ್ರದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.