LATEST NEWS
ಸ್ವಚ್ಛಗೊಳಿಸಲು ಟ್ಯಾಂಕ್ ಒಳಗೆ ಇಳಿದಿದ್ದ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸಾವು..!
ಸೂರತ್ : ಸ್ವಚ್ಛಗೊಳಿಸಲು ಟ್ಯಾಂಕ್ ಒಳಗೆ ಇಳಿದಿದ್ದ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ದುರ್ಘಟನೆ ಗುಜರಾತಿನ ಸೂರತ್‌ನ ಕಿರಣ್ ಇಂಡಸ್ಟ್ರೀಸ್ ಎಂಬ ಕಾರ್ಖಾನೆಯಲ್ಲಿ ನಡೆದಿದೆ.
ಸೂರತ್ ಜಿಲ್ಲೆಯ ಪಲ್ಸಾನ – ಕಡೋದರ ರಸ್ತೆಯ ಬಲೇಶ್ವರ ಗ್ರಾಮದ ಹೊರವಲಯದಲ್ಲಿರುವ ಕಿರಣ್ ಇಂಡಸ್ಟ್ರೀಸ್ ಎಂಬ ಮಿಲ್‌ನಲ್ಲಿ ನಾಲ್ವರು ಕಾರ್ಮಿಕರು ಸ್ವಚ್ಛಗೊಳಿಸಲೆಂದು ಟ್ಯಾಂಕ್ನ ಒಳಗೆ ಇಳಿದಿದ್ದರು. ಆದರೆ, ಟ್ಯಾಂಕ್ನ ಒಳಗೆ ಆಮ್ಲಜನಕದ ಕೊರತೆ ಉಂಟಾಗಿ ಉಸಿರಾಡಲಾರದೇ ಪ್ರಜ್ಞಾಹೀನರಾಗಿ ಉಸಿರು ಚೆಲ್ಲಿದ್ದಾರೆ.
ಘಟನೆ ಮಾಹಿತಿ ಪಡೆದ ಬಾರ್ಡೋಲಿ ಅಗ್ನಿಶಾಮಕ ದಳ ಮತ್ತು ಕಾಮ್ರೇಜ್ ಇಆರ್‌ಸಿ ಅಗ್ನಿಶಾಮಕ ದಳದ ತಂಡವು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಅವರ ರಕ್ಷಣೆಗೆ ಮುಂದಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಕಾರ್ಮಿಕರು ಇಳಿದಿದ್ದ ಆಳವಾದ ಟ್ಯಾಂಕ್ಗೆ ಇಳಿದು ಕಾರ್ಮಿಕರಿಗಾಗಿ ಶೋಧ ನಡೆಸಿದ್ದಾರೆ. ಟ್ಯಾಂಕ್ ಒಳಗೆ 4 ಜನ ಕಾರ್ಮಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಹರಸಾಹಸ ಪಟ್ಟು ನಾಲ್ವರನ್ನು ಮೇಲಕ್ಕೆತ್ತಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಉಸಿರಾಡಲು ಗಾಳಿಯ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.