UDUPI
ಸ್ವಚ್ಚ ಮಲ್ಪೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ
ಸ್ವಚ್ಚ ಮಲ್ಪೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ
ಉಡುಪಿ, ಅಕ್ಟೋಬರ್ 13 : ಸ್ವಚ್ಛ ಉಡುಪಿ ಕರೆಗೆ ಸ್ಪಂದಿಸಿರುವ ಮಲ್ಪೆಯ ಮೀನುಗಾರರು ಮಲ್ಪೆ ಬಂದರಿನೊಳಗೆ ಕಸ ಸಂಗ್ರಹಕ್ಕೆ ಸಿದ್ಧರಾಗಿದ್ದು ಸಂತೋಷದ ವಿಚಾರ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಇಂದು ಮಲ್ಪೆ ಬಂದರಿನಲ್ಲಿ ಕರಾವಳಿ ಪೇ ಪಾರ್ಕ್‍ನವರು ನೀಡಿದ ಸ್ವಚ್ಛ ಮಲ್ಪೆಗಾಗಿ ಸ್ವಚ್ಛತಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ದೈನಂದಿನ ಕಸ ಸಂಗ್ರಹಕ್ಕೆ ಏಳು ಲಕ್ಷ ರೂ. ವೆಚ್ಚದಲ್ಲಿ ಕೆ ಎಂ ಅಶ್ರಫ್ ಅವರು ವಾಹನವನ್ನು ನೀಡಿದ್ದು ಸುತ್ತ ಮುತ್ತಲ ಅಂಗಡಿ ಮುಂಗಟ್ಟುಗಳಿಗೆ ಕಸದ ಬುಟ್ಟಿಯನ್ನು ನೀಡಲಾಗಿದೆ. ಸ್ವಚ್ಛತೆ ನಮ್ಮ ದೈನಂದಿನ ಹವ್ಯಾಸವಾಗಬೇಕೆಂದ ಸಚಿವರು, ದೇಶದ ಮತ್ಸ್ಯೋದ್ಯಮದ ರಫ್ತಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಲ್ಪೆ ಬಂದರು ಸ್ವಚ್ಛತೆಗೂ ಮಾದರಿಯಾಗಬೇಕೆಂದರು.
ಯುರೋಪಿಯನ್ ಯೂನಿಯನ್ ಟೀಮ್ ಬಂದರುಗಳಲ್ಲಿನ ನೈರ್ಮಲ್ಯ ಪರಿಶೀಲನೆಗೆ ದಿಢೀರ್ ಭೇಟಿ ನೀಡುವ ಸಾಧ್ಯತೆ ಇದೆ; ಮೀನುಗಾರಿಕಾ ಬಂದರು ಅನೈರ್ಮಲ್ಯದಿಂದ ಕೂಡಿದ್ದರೆ ರಫ್ತುಗಾರಿಕೆಗೆ ಸಮಸ್ಯೆಯಾಗಲಿದೆ. ಹಾಗಾಗಿ ಮೀನುಗಾರರು ತಮ್ಮ ಬಂದರನ್ನು ಹಾಗೂ ಸುತ್ತಮುತ್ತಲ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸಲು ಈಗಾಗಲೇ ಜಿಲ್ಲಾಡಳಿತ ವೆಲ್ಲೂರು ಶ್ರೀನಿವಾಸ ಅವರ ಸಹಕಾರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದ್ದು, ಯಶಸ್ವಿ ಅನುಷ್ಠಾನದಿಂದ ಉಡುಪಿ ದೇಶದಲ್ಲೇ ಪ್ರಥಮ ಜಿಲ್ಲೆಯೆಂದು ಗುರುತಿಸಲ್ಪಡಲಿದೆ ಎಂದರು.
ಆಗಸ್ಟ್ ತಿಂಗಳ ಡಿಸಿಲ್ ಸಬ್ಸಿಡಿ ಅನುದಾನ ಕೊರತೆಯಿಂದ ವಿಳಂಬವಾಗಿಲ್ಲ; ಸಾಪ್ಟ್ ವೇರ್ ನಲ್ಲಿ ಸಂಭವಿಸಿದ ತಾಂತ್ರಿಕ ತೊಡಕಿನಿಂದ ಸಬ್ಸಿಡಿ ಖಾತೆಗೆ ಸಂದಾಯವಾಗುವಲ್ಲಿ ವಿಳಂಬವಾಗಿದೆ. ಆದಷ್ಟು ಶೀಘ್ರ ಅದು ಖಾತೆಗೆ ಬೀಳಲಿದೆ ಎಂದರು.
ನಗರಸಭೆ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ ಅವರು ಮಾತನಾಡಿ, ಉಡುಪಿಯನ್ನು ಸ್ವಚ್ಛಗೊಳಿಸಲು ನಗರಸಭೆಗೆ ಹಲವು ದಾನಿಗಳು ವಾಹನವನ್ನು ನೀಡಿದ್ದು, ಸ್ವಚ್ಛತೆಯ ಅನುಷ್ಠಾನದಲ್ಲಿ ಉಡುಪಿ ಮಾದರಿ ಜಿಲ್ಲೆಯಾಗಬೇಕಿದೆ ಎಂದರು.