DAKSHINA KANNADA
ಪುತ್ತೂರು – ಪುತ್ತಿಲ ಪರಿವಾರದ ಕಚೇರಿಗೆ ತಲ್ವಾರ್ ಹಿಡಿದು ನುಗ್ಗಲು ಯತ್ನಿಸಿದ ಹಿಂಜಾವೇ ಕಾರ್ಯಕರ್ತರು….!!

ಪುತ್ತೂರು ನವೆಂಬರ್ 10: ಪುತ್ತಿಲ ಪರಿವಾರದ ಮತ್ತು ಹಿಂದೂ ಜಾಗರಣ ವೇದಿಕೆ ಮುಖಂಡರ ನಡುವೆ ಗಲಾಟೆ ನಡೆದ ಘಟನೆ ಪುತ್ತೂರಿನ ಮುಕ್ರಂಪಾಡಿಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ್ ಒಂದರ ವಿಚಾರವಾಗಿ ಈ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ.
ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರ ಕಚೇರಿಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನುಗ್ಗಲು ಯತ್ನಿಸಿದ್ದಾರೆ. ಅರುಣ್ ಪುತ್ತಿಲ ಬೆಂಬಲಿಗರಾದ ಮನೀಶ್ ಕುಲಾಲ್ ಬನ್ನೂರು ಅವರನ್ನು ಗುರಿಯಾಗಿಟ್ಟುಗೊಂಡು ದಿನೇಶ್ ಪಂಜಿಗ ಎಂಬಾತ ನಾಲ್ವರು ಯುವಕರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದರು ಎನ್ನಲಾಗಿದೆ.

ಈ ವೇಳೆ ಪುತ್ತಿಲ ಪರಿವಾರ ಕಚೇರಿಯಲ್ಲಿ ಕೃಷ್ಣಪ್ರಸಾದ್ ಶೆಟ್ಟಿ ಮತ್ತಿತರರು ಇದ್ದು, ಮನೀಶ್ ಕುಲಾಲ್ ಕಚೇರಿಯಲ್ಲಿ ಇರಲಿಲ್ಲ. ಮಾಹಿತಿ ತಿಳಿದ ಮನೀಶ್ ಕುಲಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದವರನ್ನು 1. ಪುತ್ತೂರು ಶಾಂತಿಗೋಡು ಗ್ರಾಮದ ದಿನೇಶ ಪಂಜಿಗ (38) ,2. ನರಿಮೊಗರು ಗ್ರಾಮದ ಭವಿತ್ (19) ,3. ಪುತ್ತೂರು ಬೊಳ್ವಾರು ನಿವಾಸಿ ಮನ್ವಿತ್ (19), 4. ಆರ್ಯಾಪು ಗ್ರಾಮದ ಜಯಪ್ರಕಾಶ (18), 5. ಚಿಕ್ಕಮುಡ್ನೂರು ಗ್ರಾಮದ ಚರಣ್ (23), 6. ಪುತ್ತೂರು ಬನ್ನೂರು ಗ್ರಾಮದ ಮನೀಶ (23),7. ಪುತ್ತೂರು ಕಸಬಾ ಗ್ರಾಮದ ವಿನೀತ್ (19) ಎಂದು ಗುರುತಿಸಲಾಗಿದೆ.
ಈ ಹಿನ್ನಲೆ ಪುತ್ತೂರು ಠಾಣೆಯ ಮುಂದೆ ಹಿಂದೂ ಜಾಗರಣ ವೇದಿಕೆ ಹಾಗೂ ಪುತ್ತಿಲ ಪರಿವಾರದ ಕಾರ್ಯಕರ್ತರು ಜಮಾಯಿಸಿದ್ದಾರೆ. ಪೊಲೀಸ್ ಠಾಣೆಗೆ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಆಗಮಿಸಿ ಮಾತುಕತೆ ನಡೆಸಿದ್ದಾರೆ. ಪರಿಸ್ಥಿತಿ ಸ್ವಲ್ಪ ಬಿಗುವಿನಿಂದ ಕೂಡಿದೆ ಎಂದು ಹೇಳಲಾಗಿದೆ. ವಾಟ್ಸಾಪ್ ಗ್ರೂಪ್‌ನಲ್ಲಿ ನಡೆದ ಚರ್ಚೆಯ ಕೋಪದಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಹಾಡಹಗಲೇ ತಲವಾರು ಹಿಡಿದುಕೊಂಡಿರುವ ಸಾರ್ವಜನಿಕರಲ್ಲಿ ಆತಂಕ ಕಾರಣವಾಗಿದೆ.