LATEST NEWS
ಜುಲೈ 1 ರಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಿಟಿ ಬಸ್ ಪ್ರಾರಂಭ
ಮಂಗಳೂರು ಜೂನ್ 24: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜುಲೈ 1 ರಿಂದ ಸಿಟಿಬಸ್ ಸಂಚಾರ ಆರಂಭಿಸಲಿದೆ ಎಂದು ಕೆನರಾ ಬಸ್ ಮಾಲಕರ ಅಸೋಸಿಯೇಶನ್ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮತ್ತು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬುಧವಾರದಿಂದ ಲಾಕ್ ಡೌನ್ ನ ನಿರ್ಬಂಧದಲ್ಲಿ ಸಡಿಲಿಕೆ ಮಾಡಲಾಗಿದ್ದು, ಶೇಕಡ 50 ರಷ್ಟು ಪ್ರಯಾಣಿಕರು ಬಸ್ ನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಯಾವುದೇ ಖಾಸಗಿ ಬಸ್ ರಸ್ತೆಗಿಳಿದಿರಲಿಲ್ಲ. ಬುಧವಾರದಿಂದ 7 ದಿನ ಬಸ್ ಓಡಿಸಿದರೆ, 1 ತಿಂಗಳ ತೆರಿಗೆ ಕಟ್ಟಬೇಕು. ಇದು ಕಷ್ಟ ಸಾಧ್ಯ. ಈಗಿನ ಡೀಸೆಲ್ ಬೆಲೆಯಲ್ಲಿ ಶೇ 50 ರಷ್ಟು ಪ್ರಯಾಣಿಕರನ್ನು ಕರೆದೊಯ್ಯುವುದು ನಷ್ಟ ಉಂಟಾಗಲಿದೆ. ಅಲ್ಲದೇ ನಗರದಾದ್ಯಂತ ಕಾಮಗಾರಿಗಾಗಿ ರಸ್ತೆ ಅಗೆದು ಹಾಕಲಾಗಿದೆ. 2 ತಿಂಗಳಿನಿಂದ ನಿಂತಿದ್ದ ಬಸ್‌ಗಳನ್ನು ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಿ ದುರಸ್ತಿ ಮಾಡಿಸಬೇಕಿದೆ ಎಂದು ಬಸ್ ಮಾಲೀಕರು ತಿಳಿಸಿದ್ದಾರೆ.
ಆದಾಗ್ಯೂ ಪರಿಸ್ಥಿತಿಯನ್ನು ಗಮನಿಸಿ ಜುಲೈ 1 ರಿಂದ ಸಿಟಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಬಸ್ ಮಾಲಕರು ತಿಳಿಸಿದ್ದಾರೆ. ಆದರೆ ಸರಕಾರದ ಮಾರ್ಗಸೂಚಿಯನ್ನು ಯಥಾವತ್ತಾಗಿ ಪಾಲಿಸಲು ಸಾಧ್ಯವಿಲ್ಲ. ಬಸ್ಸಿನಲ್ಲಿರುವ ಸೀಟಿನ ಅರ್ಧದಷ್ಟು ಪ್ರಯಾಣಿಕರನ್ನು ಕರೆದುಕೊಂಡು ಹೋದರೆ ನಮಗೆ ಯಾವುದೇ ಆದಾಯ ಲಭಿಸದು. ಬಸ್ ಸಾರಿಗೆ ಉದ್ಯಮದ ಭವಿಷ್ಯದ ಹಿತದೃಷ್ಟಿಯಿಂದ ಜುಲೈ 1ರಿಂದ ಬಸ್ ಸಂಚಾರ ಆರಂಭಿಸಲು ಮುಂದಾಗಿದ್ದೇವೆ ಎಂದಿದ್ದಾರೆ.