LATEST NEWS
ಉಳ್ಳಾಲ – ಮನೆಯ ಮುಂದೆ ಕ್ರೈಸ್ತ ಧರ್ಮ ಪ್ರಚಾರ ಸಾಮಾಗ್ರಿ ಪ್ರತ್ಯಕ್ಷ – ಸ್ಥಳದಲ್ಲಿ ಬಿಗುವಿನ ವಾತಾವರಣ
ಉಳ್ಳಾಲ ಸೆಪ್ಟೆಂಬರ್ 24: ಮನೆಯ ಗೇಟುಗಳ ಮುಂದೆ ಅಪರಿಚಿತ ವ್ಯಕ್ತಿಗಳು ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿ ಪತ್ರ ಹಾಗೂ ಪುಸ್ತಕಗಳನ್ನು ಇಟ್ಟಿರುವ ಘಟನೆ ಸೋಮೇಶ್ವರದಲ್ಲಿರುವ ಉಳ್ಳಾಲ ರೈಲ್ವೇ ನಿಲ್ದಾಣ ಸಮೀಪ ನಡೆದಿದೆ.
ರೈಲ್ವೆ ನಿಲ್ದಾಣದ ಹಿಂಭಾಗದಲ್ಲಿರುವ 15 ಕ್ಕೂ ಅಧಿಕ ಮನೆಗಳ ಗೇಟುಗಳಲ್ಲಿ ಬೆಳಿಗ್ಗೆ ಲುಂಗಿ ಧರಿಸಿದ್ದ ಅಪರಿಚಿತ ವ್ಯಕ್ತಿ 15 ರಷ್ಟು ಮನೆಗಳ ಗೇಟುಗಳಲ್ಲಿ ಕ್ರೈಸ್ತ ಧರ್ಮ ವಿಚಾರಗಳ ಕುರಿತ ಕನ್ನಡ ಹಾಗೂ ಮಲಯಾಳಂನಲ್ಲಿ ಬರೆದಿರುವ ಭಿತ್ತಿಪತ್ರ, ಎರಡು ಪುಸ್ತಕಗಳನ್ನು ಮನೆಗಳ ಗೇಟಿನಲ್ಲಿರಿಸಿದ್ದಾನೆ. ಈ ಸಂದರ್ಭ ವೃದ್ಧೆಯೊಬ್ಬರು ವ್ಯಕ್ತಿಯನ್ನು ಗಮನಿಸಿ ಸೇಲ್ಸ್ ಮೆನ್ ಅಂದುಕೊಂಡು ತಮಗೇ ಯಾವುದೇ ಸೊತ್ತುಗಳು ಬೇಡ ಅಂದಿದ್ದಾರೆ. ಆದರೂ ಆತ ಅವರ ಗೇಟಿನಲ್ಲಿ ಪುಸ್ತಕ, ಭಿತ್ತಿಪತ್ರ , ಸ್ಟಿಕ್ಕರ್ ಇರಿಸಿ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಉಳ್ಳಾಲ ಬಜರಂಗದಳ ಘಟಕ ಭೇಟಿ ನೀಡಿ ಭಿತ್ತಿ ಪತ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲಿರುವ ಮೊಬೈಲ್ ನಂಬರಿರುವ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ.
ಘಟನೆಯಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ಮತಾಂತರ ನಡೆಸುವ ಉದ್ದೇಶದಿಂದಲೇ ಕೃತ್ಯ ಎಸಗಲಾಗಿದೆ ಅನ್ನುವ ಆರೋಪ ಮಾಡಿದ್ದಾರೆ. ಸ್ಥಳದಲ್ಲಿ ಉಳ್ಳಾಲದ ಬಜರಂಗದಳದ ಕಾರ್ಯಕರ್ತರು ಜಮಾಯಿಸಿದ್ದಾರೆ. ಉಳ್ಳಾಲ ಠಾಣಾ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.