Connect with us

DAKSHINA KANNADA

ತುಷ್ಟೀಕರಣ ಮತ್ತು ಕಾಂಗ್ರೆಸ್ ನ ಸಂವಿಧಾನ ಬದಲಾವಣೆಯ ಮಾತಿನಿಂದ ಪ್ರಜಾಪ್ರಭುತ್ವಕ್ಕೆ ಅಪಾಯ – ಸಂಸದ ಕ್ಯಾ. ಚೌಟ

ನವದೆಹಲಿ ಮಾರ್ಚ್ 25: ಮುಸ್ಲಿಮರನ್ನು ಓಲೈಕೆ ಮಾಡುವುದಕ್ಕಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಈ ದೇಶಕ್ಕೆ ಕೊಟ್ಟಿರುವ ಸಂವಿಧಾನವನ್ನೇ ತಿದ್ದುಪಡಿ ಮಾಡಬೇಕೆಂದು ರಾಜ್ಯದ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್‌ ಹೇಳಿರುವುದು ಅತ್ಯಂತ ಖಂಡನೀಯ ಹಾಗೂ ಆತಂಕಕಾರಿ ಬೆಳವಣಿಗೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.


ಸಂವಿಧಾನ ಬದಲಾವಣೆ ಬಗ್ಗೆ ಡಿಕೆ ಶಿವಕುಮಾರ್‌ ನೀಡಿರುವ ಹೇಳಿಕೆಯನ್ನು ಕಟುವಾಗಿ ವಿರೋಧಿಸಿರುವ ಕ್ಯಾ. ಚೌಟ ಅವರು, ರಾಜ್ಯದಲ್ಲಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ವಿಧೇಯಕವನ್ನೇ ಪಾಸ್‌ ಮಾಡಿರುವ ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರ್ಕಾರ ಇದೀಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಮುಸ್ಲಿಮರ ವೋಟ್‌ ಬ್ಯಾಂಕ್‌ ತುಷ್ಟೀಕರಣಕ್ಕಾಗಿ ಇಡೀ ಸಂವಿಧಾನದ ಅಡಿಪಾಯವನ್ನೇ ಅಲುಗಾಡಿಸಲು ಹೊರಟಿರುವುದು ಅತ್ಯಂತ ಗಂಭೀರ ವಿಚಾರ. ರಾಜ್ಯದ ಉಪಮುಖ್ಯಮಂತ್ರಿಯಾಗಿ ಕೇವಲ ಒಂದು ಮುಸ್ಲಿಂ ಸಮುದಾಯದವರಿಗಾಗಿ ಅಂಬೇಡ್ಕರ್‌ ಅವರು ಅಖಂಡ ಭಾರತಕ್ಕಾಗಿ ರಚಿಸಿದ ಸಂವಿಧಾನವನ್ನೇ ಬದಲಿಸಬೇಕೆಂಬ ಹೇಳಿಕೆ ಕೊಟ್ಟಿರುವುದು ದುರದೃಷ್ಟಕರ. ಮುಸ್ಲಿಮರಿಗಾಗಿ ಪ್ರತ್ಯೇಕ ಮೀಸಲಾತಿ ಬಿಲ್‌, ಸಾವಿರ ಕೋಟಿ ಕೊಟ್ಟು ಪ್ರತ್ಯೇಕ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ರಚಿಸುವುದಕ್ಕೆ ಹೊರಟಿರುವ ಸಿದ್ದರಾಮಯ್ಯನವರ ಈ ಧರ್ಮಾಂಧ ಕಾಂಗ್ರೆಸ್‌ ಸರ್ಕಾರ ಯಾರ ಅಭಿವೃದ್ಧಿ ಕಡೆ ಹೋಗುತ್ತಿದೆ ಎನ್ನುವ ಸೂಕ್ಷ್ಮತೆಯನ್ನು ಕರ್ನಾಟಕದ ಪ್ರಜ್ಞಾವಂತ ಮತದಾರರುಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

 

ಕಾಂಗ್ರೆಸ್‌ನವರು ಎಷ್ಟರ ಮಟ್ಟಿಗೆ ಸಂವಿಧಾನ ವಿರೋಧಿಗಳು ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವಿರೋಧಿಗಳು ಎಂಬುದನ್ನು ಡಿಕೆ ಶಿವಕುಮಾರ್‌ ಅವರ ಹೇಳಿಕೆ ಮತ್ತೊಮ್ಮೆ ಸಾಬೀತುಪಡಿಸಿದೆ. ಆ ಮೂಲಕ ಭಾರತದ ಭವ್ಯ ಸಂಸ್ಕೃತಿ ಹಾಗೂ ಸಂವಿಧಾನದ ಬಗೆಗಿನ ಕಾಂಗ್ರೆಸ್‌ನ ದ್ವೇಷ, ಸಮಾಜವನ್ನು ಜಾತಿಯಡಿ ಒಡೆಯುವ ಕೋಮುವಾದಿ ಪ್ರವೃತ್ತಿ ಮುಂದುವರಿದಿದೆ. ಡಿಕೆ. ಶಿವಕುಮಾರ್‌ ಅಂಥವರೇ ಸಂವಿಧಾನಕ್ಕೆ ಅಪಚಾರ ಎಸಗಿರಬೇಕಾದರೆ, ಕಾಂಗ್ರೆಸ್‌ನ ಸ್ವಯಂ ಘೋಷಿತ ಸಂವಿಧಾನದ ರಕ್ಷಕರು ಈಗ ಎಲ್ಲಿದ್ದಾರೆ? ಕಾಂಗ್ರೆಸ್ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗಿಂತ ಸ್ವಯಂ ಹಿತಾಸಕ್ತಿ ಹಾಗೂ ಒಂದು ಮತೀಯರನ್ನಷ್ಟೇ ಓಲೈಸುವ ಧರ್ಮಾಧಾರಿತ ಸಂಕುಚಿತ ಮನಸ್ಥಿತಿಯನ್ನೇ ಹೊಂದಿದೆ ಎಂಬುದಕ್ಕೆ ಸಚಿವ ಡಿಕೆ ಶಿವಕುಮಾರ್‌ ಅವರ ಹೇಳಿಕೆಯೇ ಸಾಕ್ಷಿ ಎಂದು ಆರೋಪಿಸಿದರು.

 

ಅಂಬೇಡ್ಕರ್‌ ನೀಡಿದ ಸಂವಿಧಾನವನ್ನೇ ಬುಡಮೇಲು ಮಾಡಿ ಮುಸ್ಲಿಮರ ಪ್ರತ್ಯೇಕತೆಯ ಸಮಾಜ ನಿರ್ಮಿಸುವುದಕ್ಕೆ ಬಿಜೆಪಿ ಪಕ್ಷವು ಈ ದೇಶದಲ್ಲಿ ಎಂದಿಗೂ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್‌ನವರ ಈ ರೀತಿಯ ತುಷ್ಟೀಕರಣದ ಮತೀಯ ರಾಜಕಾರಣ ಹಾಗೂ ಮುಸ್ಲಿಮರಿಗಷ್ಟೇ ಸರ್ಕಾರಿ ಮೀಸಲಾತಿ ನೀಡುವ ಕೋಮುವಾದಿ ನಿರ್ಧಾರಗಳ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ಮಾಡುವುದಾಗಿ ಕ್ಯಾ. ಚೌಟ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *