DAKSHINA KANNADA
ಪುಂಡ-ಪೋಕರಿಗಳ ಅಡ್ಡೆಯಾದ ಚಿಣ್ಣರ ಪಾರ್ಕ್
ಪುತ್ತೂರು ಜನವರಿ 6: ಸಾರ್ವಜನಿಕರ ಉಪಯೋಗಕ್ಕೆಂದು ಬಳಕೆಯಾಗಬೇಕಾದ ಸೌಲಭ್ಯಗಳು ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೇಗೆ ನಿರುಪಯೋಗಿ ಆಗುತ್ತದೆ ಎನ್ನುವುದಕ್ಕೆ ಪುತ್ತೂರಿನಲ್ಲೊಂದು ಉದಾಹರಣೆಯಿದೆ. ಪುತ್ತೂರು ನಗರದ ಮಧ್ಯಭಾಗದಲ್ಲಿ ನಗರಸಭೆ ನಿರ್ಮಿಸಿರುವ ಮಕ್ಕಳ ಪಾರ್ಕ್ ಸಮರ್ಪಕ ನಿರ್ವಹಣೆಯಿಲ್ಲದೆ ಪಾಳು ಬೀಳುತ್ತಿದೆ. 13 ಲಕ್ಷ ರೂಪಾಯಿ ವೆಚ್ಚ ಮಾಡಿ ನಿರ್ಮಾಣಗೊಂಡ ಈ ಪಾರ್ಕ್ ಇದೀಗ ಪುಂಡು-ಪೋಕರಿಗಳ ಆಕರ್ಷಕ ತಾಣವಾಗಿಯೂ ಬದಲಾಗುತ್ತಿದೆ.
ಪುತ್ತೂರು ನಗರಸಭೆಯ ಆಡಳಿತಕ್ಕೆ ಒಳಪಟ್ಟಿರುವ ಮಕ್ಕಳ ಪಾರ್ಕ್ ಇತ್ತೀಚಿನ ದಿನಗಳಲ್ಲಿ ಪಾಳು ಬೀಳಲಾರಂಭಿಸಿದೆ. 2009-10 ನೇ ಸಾಲಿನಲ್ಲಿ ಅಂದಿನ ಪುರಸಭೆಯ ಅಧ್ಯಕ್ಷರಾಗಿದ್ದ ರಾಜೇಶ್ ಬನ್ನೂರು ಅವರ ಮುತುವರ್ಜಿಯಲ್ಲಿ ನಿರ್ಮಾಣಗೊಂಡ ಈ ಪಾರ್ಕ್ ತನ್ನ ಉದ್ಧೇಶಿತ ಗುರಿಯನ್ನು ತಲುಪುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಪಾರ್ಕ್ ನಲ್ಲಿ ಮಕ್ಕಳಿಗಾಗಿ ಗುಹೆ, ಮಕ್ಕಳ ನಾಟಕ ಹಾಗೂ ಇತರ ಕಾರ್ಯಕ್ರಮಗಳ ಆಯೋಜನೆಗಾಗಿ ಬಯಲು ರಂಗ ಮಂದಿರ ಹೀಗೆ ಎಲ್ಲವನ್ನೂ ಮಕ್ಕಳ ಅಭಿರುಚಿಗೆ ತಕ್ಕಂತೆ ಜೋಡಿಸಲಾಗಿದೆ.
ಆದರೆ ಪಾರ್ಕ್ ನ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಬಿಟ್ಟುಕೊಟ್ಟ ಬಳಿಕ ಬೆರಳೆಣಿಕೆಯ ಕಾರ್ಯಕ್ರಮಗಳು ಆಗಿದ್ದು ಬಿಟ್ಟರೆ ಇಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ. ಪಾರ್ಕನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಪಾರ್ಕ್ ದಿನದಿಂದ ದಿನಕ್ಕೆ ಮಕ್ಕಳಿಂದ ದೂರವಾಗಲು ಆರಂಭವಾಗಿದೆ. ಅಲ್ಲದೆ ಮಕ್ಕಳ ಜೊತೆಗೆ ಬರುತ್ತಿದ್ದ ಪೋಷಕರೂ ಈ ಪಾರ್ಕ್ ನ ಅವ್ಯವಸ್ಥೆಯನ್ನು ಕಂಡು ಇತ್ತ ಸುಳಿದಾಡುವುದನ್ನೇ ನಿಲ್ಲಿಸಿದ್ದಾರೆ. ಇಲ್ಲಿ ಪುಂಡ ಪೋಕರಿಗಳು ಎಷ್ಟು ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದಾರೆ ಎನ್ನುವುದು ಪಾರ್ಕ್ ನ ಸುತ್ತ ಹರಡಿರುವ ಮದ್ಯದ ಕಾಗದದ ಪೊಟ್ಟಣಗಳಿಂದ ಕಂಡು ಬರುತ್ತಿದೆ. ತರಗಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಮದ್ಯದ ಕಾಗದದ ಪೊಟ್ಟಣಗಳ ರಾಶಿ ಪಾರ್ಕ್ ನಲ್ಲಿದೆ.
ಮಕ್ಕಳಿಗಾಗಿ ಬಳಕೆಯಾಗಬೇಕಿದ್ದ ಪಾರ್ಕ್ ಇತ್ತೀಚಿನ ದಿನಗಳಲ್ಲಿ ಪುಂಡ-ಪೋಕರಿಗಳ ಪುನರ್ವಸತಿ ಕೇಂದ್ರವಾಗಿ ಬದಲಾಗುತ್ತಿದೆ. ಇಂಥ ವ್ಯಕ್ತಿಗಳಿಗೆ ಬೆಳಿಗ್ಗಿನಿಂದ ರಾತ್ರಿಯವರೆಗಿನ ಆಶ್ರಯ ಕೇಂದ್ರವಾಗಿಯೂ ಇದು ಮಾರ್ಪಟ್ಟಿದೆ. ಪಾರ್ಕ್ ತುಂಬಾ ಗಿಡಗುಂಟೆಗಳು ತುಂಬಿದ್ದು, ಇವುಗಳ ಜೊತೆಗೆ ನಾನಾ ಮಾದರಿಯ ಮದ್ಯದ ಬಾಟಲಿಗಳೂ ತುಂಬಿ ತುಳುಕುತ್ತಿವೆ. ಅಲ್ಲದೆ ರಸ್ತೆ ಬದಿಯಲ್ಲಿ ಸಾಗುವ ವಾಹನಗಳ ತ್ಯಾಜ್ಯಗಳನ್ನು ಡಂಪ್ ಮಾಡುವ ತಾಣವಾಗಿಯೂ ಇದು ಉಪಯೋಗವಾಗುತ್ತಿದೆ. ಲಕ್ಷಾಂತರ ರೂಪಾಯಿ ವ್ಯಯಮಾಡಿ ನಿರ್ಮಿಸಿದ ಈ ಪಾರ್ಕ್ ಹೀಗೆ ಪಾಳು ಬಿದ್ದ ಸ್ಥಿತಿಗೆ ತಲುಪಿರುವುದು ಬೇಸರ ತಂದಿದೆ ಎನ್ನುತ್ತಾರೆ ಪತ್ರಕರ್ತ ಶ್ರವಣ್ ಕುಮಾರ್ ನಾಳ.
ವಿಪರ್ಯಾಸವೆಂದರೆ ನಗರಸಭಾ ಕಛೇರಿಯಿಂದ ಕೇವಲ ಕೂಗಳತೆಯ ದೂರದಲ್ಲಿರುವ ಈ ಪಾರ್ಕ್ ನಲ್ಲಿ ಸ್ವಚ್ಛಗೊಳಿಸಲು ವಿಫಲವಾದ ನಗರಸಭೆ ಇಡೀ ಪುತ್ತೂರು ನಗರವನ್ನು ಸ್ವಚ್ಛ ಪುತ್ತೂರು ಮಾಡಲು ಹೊರಟಿರುವುದು ನಗೆಪಾಟಲಿಗೂ ಕಾರಣವಾಗಿದೆ.
ಮಕ್ಕಳ ಕಾರ್ಯಕ್ರಮಗಳಿಗೆ ಬೇಕಾದ ರಂಗಸ್ಥಳ, ವಾಕರ್ಸ್ ಪಾತ್, ಅಲಂಕಾರಿಕ ದೀಪದ ವ್ಯವಸ್ಥೆಗಳನ್ನು ಈ ಪಾರ್ಕ್ ನಲ್ಲಿ ಮಾಡಲಾಗಿದೆ. ಪಾರ್ಕ್ ಸಾರ್ವಜನಿಕರ ಬಳಕೆಗೆ ನೀಡಿದ ಬಳಿಕ ಈ ಪಾರ್ಕ್ ಅನ್ನು ನಿರ್ವಹಣೆ ಮಾಡಿಲ್ಲ ಎನ್ನುವ ವಿಚಾರ ಕೂಡಾ ಈ ಪಾರ್ಕ್ ನೋಡಿದಾಗ ತಿಳುವಳಿಕೆಗೆ ಬರುತ್ತದೆ