DAKSHINA KANNADA
ಅಂಗನವಾಡಿ ಕಟ್ಟಡದ ವಿದ್ಯುತ್ ಸಂಪರ್ಕಕ್ಕೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಆಕ್ಷೇಪ: ಸ್ಥಳಿಯರಿಂದ ಆಕ್ರೋಶ
ಪುತ್ತೂರು: ಕಳೆದ ಒಂದು ವರ್ಷಗಳಿಂದ ಸಂಸ್ಥೆಯೊಂದು ಕಟ್ಟಿದ ಕಟ್ಟಡದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅಂಗನವಾಡಿ ಕೇಂದ್ರ ತಮ್ಮದೆಂದು ಪುತ್ತೂರು ತಾಲೂಕು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಆಕ್ಷೇಪ ಎತ್ತಿದೆ. ಪುತ್ತೂರು ತಾಲೂಕಿನ 34 ನೇ ನೆಕ್ಕಿಲ್ಲಾಡಿಯ ಮೈಂದಡ್ಕ ಎಂಬಲ್ಲಿ ಅಂಗನವಾಡಿಗೆ ಸ್ವಂತ ಕಟ್ಟದ ಇಲ್ಲದ ಕಾರಣ ಸ್ಥಳೀಯ ನಮ್ಮೂರು ನಮ್ಮವರು ಎನ್ನುವ ಸಂಸ್ಥೆ ತಮಗೆ ಸರಕಾರದಿಂದ ಮಂಜೂರಾಗಲು ಸಿದ್ಧಗೊಂಡಿದ್ದ ಜಾಗದಲ್ಲಿ ಕಟ್ಟಡವನ್ನು ನಿರ್ಮಿಸಿ ಅಂಗನವಾಡಿ ಕಾರ್ಯಾಚರಿಸಲು ಅವಕಾಶ ಮಾಡಿಕೊಟ್ಟಿದ್ದರು. ಇತ್ತೀಚೆಗೆ ಸಂಸ್ಥೆ ಪುಟಾಣಿ ಮಕ್ಕಳಿಗೆ ಫ್ಯಾನ್ ಇಲ್ಲದೆ ಕ್ಲಾಸ್ ರೂಂ ನಲ್ಲಿ ಕುಳಿತುಕೊಳ್ಳುದನ್ನು ತಪ್ಪಿಸಲು ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮನವಿ ಮಾಡಿತ್ತು. ಈ ಮನವಿಗೆ ಸ್ವತಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಅಡ್ಡಿ ಪಡಿಸಿರೋದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.
ನಮ್ಮೂರು ನಮ್ಮವರು ಎನ್ನುವ ಸಂಘ ಕಳೆದ ಹತ್ತು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದು, ಈ ಸಂಘದ ಕಾರ್ಯಚಟುವಟಿಕೆಗಾಗಿ ಸರಕಾರಿ ಜಮೀನು ಕಾಯ್ದಿರಿಸುವಂತೆ ಸಂಘ ಸರಕಾರಕ್ಕೆ ಮನವಿ ಮಾಡಿತ್ತು. ಈ ಹಿನ್ನಲೆಯಲ್ಲಿ ಮೈಂದಡ್ಕದ ಸರಕಾರಿ ಜಾಗದಲ್ಲಿ ಸುಮಾರು 5 ಸೆಂಟ್ಸ್ ಜಾಗವನ್ನು ಮೀಸಲಿಟ್ಟು, ಸರ್ವೇ ಇಲಾಖೆಯಲ್ಲಿ ಕಡತವೂ ಇತ್ತು. ಈ ನಡುವೆ ಖಾಸಗಿ ವ್ಯಕ್ತಿಯೊಬ್ಬರ ಮನೆಯ ಒಂದು ಪಾರ್ಶ್ವದಲ್ಲಿ ನಡೆಯುತ್ತಿದ್ದ ಅಂಗನವಾಡಿಯನ್ನು ಸ್ಥಳಾಂತರಿಸುವಂತೆ ಮನೆ ಮಾಲಿಕರು ಪುತ್ತೂರು ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದರು.
ಈ ಸಂದರ್ಭದಲ್ಲಿ ಅಂಗನವಾಡಿ ತರಗತಿ ನಡೆಸಲು ಕಟ್ಟಡದ ವ್ಯವಸ್ಥೆಯಿಲ್ಲದ ಕಾರಣ, ಅಂಗನವಾಡಿದ ಸಿಬ್ಬಂದಿಗಳು ನಮ್ಮೂರು, ನಮ್ಮವರು ಸಂಸ್ಥೆಯ ಗಮನಕ್ಕೆಡ ತಂದಿದ್ದರು. ತಕ್ಷಣವೇ ಸ್ಪಂದಿಸಿದ ಸಂಘ, ಸರಕಾರದಿಂದ ತಮಗೆ ಮೀಸಲಿಟ್ಡ ಜಾಗದಲ್ಲಿ ಕಟ್ಡಡವನ್ನು ಕಟ್ಟಿ ಅಂಗನವಾಡಿ ನಡೆಸಲು ಅವಕಾಶ ಕಲ್ಪಿಸಿತ್ತು. ಒಂದು ವರ್ಷದ ಕಾಲ ಯಾವುದೇ ಗೊಂದಲವಿಲ್ಲದೆ ಸಾಗಿದ ಅಂಗನವಾಡಿ ಇದೀಗ ಗೊಂದಲದ ಗೂಡಾಗಿದೆ. ಮಕ್ಕಳಿಗೆ ಬೇಸಿಗೆಯಲ್ಲಿ ಕಟ್ಟಡದೊಳಗೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸಂಘ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಳಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಒಂದು ವರ್ಷಗಳ ಕಾಲ ಯಾವುದೇ ಗೊಂದಲವಿಲ್ಲದೆ ಅಂಗನವಾಡಿಯನ್ನು ನಡೆಸಿಕೊಂಡಿದ್ದ ಇಲಾಖೆ ಜ್ಞಾನೋದಯ ರೀತಿಯಲ್ಲಿ ಈ ಘಟನೆ ಗುರುತಿಸಿಕೊಂಡಿದೆ. ಅಂಗನವಾಡಿ ಕಟ್ಟಡ ತಮ್ಮದೆಂದು, ಸರಕಾರ ತಮ್ಮ ಹೆಸರಿಗೆ ಬರೆದಿದೆ ಎನ್ನುವ ಕ್ಯಾತೆ ತೆಗೆದಿದೆ. ಏಕಾಏಕಿ ಕಟ್ಟಡ ನಿರ್ಮಾಣಗೊಂಡಿರುವ ಜಾಗ ತಮ್ಮದೆಂದು ಇಲಾಖೆ ವಾದಿಸಲು ಆರಂಭಿಸಿದೆ.
ಮೈಂದಡ್ಕ ಅಂಗನವಾಡಿ ಕಟ್ಟಡಕ್ಕೆ ಸ್ವಂತ ಕಟ್ಟಡ ಇಲ್ಲದ ಕಾರಣ , ಎರಡು ವರ್ಷಗಳ ಹಿಂದ ಈ ಅಂಗನವಾಡಿಗೆ ಕಟ್ಟಡ ನಿರ್ಮಾಣಕ್ಕಾಗಿ 16 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿತ್ತು. ಆದರೆ ಅಂಗನವಾಡಿ ಕಟ್ಟಲು ಬೇಕಾದ ಜಾಗವನ್ನು ಮಾತ್ರ ಇಲಾಖೆ ಗುರುತಿಸದೆ ಕಾಲಹರಣ ಮಾಡಿತ್ತು ಎನ್ನುವ ಆರೋಪವೂ ಇದೆ. ಇದೇ ಕಾರಣಕ್ಕೆ ಸರಕಾರದಿಂದ ಬಂದ 16 ಲಕ್ಷ ರೂಪಾಯಿ ಮತ್ತು ಸರಕಾರದ ಕೈ ಸೇರಿದೆ. ಇದೀಗ ಖಾಸಗಿ ಸಂಸ್ಥೆಯು ಕಟ್ಟಿದ ಕಟ್ಟಡವು ತಮ್ಮದೆಂದು ವಾದಿಸುತ್ತಿರುಗಲವುದಕ್ಕೆ ಸಂಘಡನೆ ಮತ್ತು ಸ್ಥಳೀಯ ಜನರ ವಿರೋಧ ವ್ಯಕ್ತವಾಗಿದೆ. ಬೇಸಿಗೆಯಲ್ಲಿ ಫ್ಯಾನ್ ಇಲ್ಲದ ಕಟ್ಟಡದ ಒಳಗೆ ಬೇಯುತ್ತಿದ್ದ ಪುಟಾಣಿಗಳಿಗಾಗಿ ವಿದ್ಯುತ್ ಸಂಪರ್ಕಕ್ಕೆ ನಮ್ಮೂರು ನಮ್ಮವರು ಸಂಸ್ಥೆ ಮುಂದಾದಾಗ ಇಲಾಖೆ ಎಚ್ಚೆತ್ತುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಸರಕಾರದಿಂದ ಬಿಡುಗಡೆಯಾದ ಹಣವನ್ನು ಖರ್ಚು ಮಾಡಿ ಖಾಸಗಿ ಸಂಸ್ಥೆ ಕಟ್ಟಿಡ ಕಟ್ಟಡವನ್ನೇ ತಮ್ಮದೆಂದು ಗುರುತಿಸಲು ಪ್ರಯತ್ನ ನಡೆಯುತ್ತಿದೆ ಎನ್ನುವ ಆರೋಪ ಸ್ಥಲೀಯರದ್ದಾಗಿದೆ.
ಗೊಂದಲ ಮುಗಿಯುವ ತನಕ ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕರೆದುಕೊಂಡು ಬರದೇ ಇರಲು ಪೋಷಕರು ತೀರ್ಮಾನಿಸಿದ್ದಾರೆ. ಈ ಘಟನೆ ಇದೀಗ ರಾಜಕೀಯ ತಿರುವನ್ನೂ ಪಡೆದುಕೊಂಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಆರಂಭಿಸಿದೆ. ಆದರೆ ಈ ಇಬ್ಬರ ಗೊಂದಲದಿಂದ ಪುಟಾಣಿ ಮಕ್ಕಳ ಶಿಕ್ಷಣದ ಅರಿವು ಬಾಡಿದಂತಾಗಿದೆ.