DAKSHINA KANNADA
ಮುಖ್ಯಮಂತ್ರಿ ದ.ಕ ಜಿಲ್ಲಾ ಪ್ರವಾಸ : ಪರಿಸ್ಥಿತಿ ನಿಭಾಯಿಸಲು ಎಡವಿದ ಪೋಲಿಸ್ ಇಲಾಖೆ
ಮುಖ್ಯಮಂತ್ರಿ ದ.ಕ ಜಿಲ್ಲಾ ಪ್ರವಾಸ : ಪರಿಸ್ಥಿತಿ ನಿಭಾಯಿಸಲು ಎಡವಿದ ಪೋಲಿಸ್ ಇಲಾಖೆ
ಮಂಗಳೂರು, ಅಕ್ಟೋಬರ್ 23 : ಮುಖ್ಯಮಂತ್ರಿ ಸಿದ್ಧರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಅಕ್ಟೋಬರ್ 22 ರ ರವಿವಾರ ಆಗಮಿಸಿದ್ದರು.
ಸಚಿವರ ಜೊತೆಗೆ ಸಚಿವ ಸಂಪುಟದ ಹಲವು ಸಚಿವರುಗಳೂ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು.ಆದರೆ ಮುಖ್ಯಮಂತ್ರಿ ಗಳ ಈ ಭೇಟಿ ಹಲವು ಗೊಂದಲಗಳಿಗೂ ಕಾರಣವಾಗಿದೆ. ಇವುಗಳನ್ನು ನಿಭಾಯಿಸಲು ಜಿಲ್ಲೆಯ ಪೋಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಕಂಡು ಬಂದಿದೆ.
ಸಿಎಂ ಮಂಗಳೂರು ವಿಮಾನ ತಲುಪುತ್ತಿದ್ದಂತೆ ಈ ಗೊಂದಲಗಳು ಆರಂಭಗೊಂಡಿವೆ. ಮೊದಲಿಗೆ ಕಾಂಗ್ರೇಸ್ ಪಕ್ಷದ ಕೆಲ ಫುಡಾರಿಗಳು ಪೋಲೀಸರನ್ನೇ ನಿಯಂತ್ರಿಸುವ ಪ್ರಯತ್ನ ನಡೆಸಿದ್ದರು.
ಸಿಎಂ ವಿಮಾನ ನಿಲ್ದಾಣದಿಂದ ಹೊರ ಬಂದಾಗ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾರ ಒಂದು ಗುಂಪು, ಯುವ ಕಾಂಗ್ರೇಸ್ ನ ಜಿಲ್ಲಾಧ್ಯಕ್ಷ ಮಿಥುನ್ ರೈ ಯ ಒಂದು ಗುಂಪು, ಹಾಗೂ ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್ ಅವರ ಮತ್ತೊಂದು ಗುಂಪು.
ಈ ಎಲ್ಲಾ ಗುಂಪುಗಳು ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೇರಲು ಆಗಮಿಸಿದ ಪ್ರಯಾಣಿಕರು, ಸಾರ್ವಜನಿಕರು ಸೇರಿ ಎಲ್ಲರಿಗೂ ತೊಂದರೆಯುಂಟು ಮಾಡುತ್ತಿತ್ತು.
ಸಿಎಂ ಹೊರಗೆ ಬಂದಾಗ ಎಲ್ಲಾ ಗುಂಪುಗಳು ಮುಖ್ಯಮಂತ್ರಿಯನ್ನು ಮುತ್ತಿದ್ದು, ಇದನ್ನು ನಿಭಾಯಿಸಲು ಪೋಲೀಸರು ತೆಗೆದುಕೊಂಡ ಕ್ರಮ ಪ್ರಶ್ನಾರ್ಹವಾಗಿದೆ.
ಇದ್ದ ಚಾಲಿಪೋಲಿಗಳೆಲ್ಲಾ ವಿಮಾನ ನಿಲ್ದಾಣದಲ್ಲಿ ಸೇರುವುದನ್ನು ಪೋಲೀಸರು ತಡೆಯದ ಹಿನ್ನಲೆಯಲ್ಲಿ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆಯಿತು.
ಕಾಂಗ್ರೆಸ್ ಕಾರ್ಯಕರ್ತರ ಅವತಾರಕ್ಕೆ ಸ್ವತ ಸಿಎಂ ಸಾಹೇಬರೂ ಸಿಡಿಮಿಗೊಂಡಿದ್ದರು.
ವಿಮಾನ ನಿಲ್ದಾಣದಿಂದ ಬಿ.ಸಿ.ರೋಡ್ ಗೆ ಹೊರಟ ದಿಬ್ಬಣ ಮತ್ತೆ ಗೊಂದಲದ ಗೂಡಾಗಿತ್ತು. ಸಿಎಂ ಬರುವ ಗಂಟೆಗೆ ಮೊದಲೇ ಹೆದ್ದಾರಿಯನ್ನು ಪೂರ್ಣ ಬಂದ್ ಮಾಡಲಾಗಿತ್ತು.
ಇದರಿಂದಾಗಿ ಇಡೀ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಅ್ಯಂಬುಲೆನ್ಸ್ ನಂತಹ ತುರ್ತು ಸೇವೆಗಳಿಗೂ ಅಡ್ಡಿಯಾಯಿತು.
ನೂತನವಾಗಿ ನಿರ್ಮಾಣಗೊಂಡ ಮಿನಿ ವಿಧಾನ ಸೌಧವನ್ನು ಉದ್ಘಾಟಿಸಲು ಸಿಎಂ ಬರುತ್ತಿದ್ದಂತೆ ಕೆಲವು ಫೋಟೋ ವೀರರು ತಮ್ಮ ಫೋಟೋ ಗಳೂ ಪತ್ರಿಕೆಯಲ್ಲಿ ಬರಲಿ ಎನ್ನುವ ಕಾರಣಕ್ಕೆ ಪೈಪೋಟಿ ನಡೆಸಿದರು.
ಪರಿಣಾಮ ಮಿನಿ ವಿಧಾನಸೌಧದ ಒಳಗೆ ನುಗ್ಗಿ ವಿಧಾನ ಸೌಧ ಲೋಕಾರ್ಪಣೆಗೊಳ್ಳುವ ಮೊದಲೇ ಹೊಸ ಬಾಗಿಲನ್ನೇ ಮುರಿದು ಹಾಕಿದ್ದರು.
ಇಷ್ಟಕ್ಕೇ ಬಿಡದೆ ಕಾರ್ಯಕರ್ತರ ಪಡೆ ಸಿಎಂ ನೋಡಲು ಮುಗಿಬಿದ್ದ ಕಾರಣ ಮತ್ತೆ ಪೋಲೀಸರು ಗುಂಪನ್ನು ಚದುರಿಸಲು ಹರ ಸಾಹಸ ಪಟ್ಟರು.
ಈ ಘಟನೆಯಲ್ಲಿ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರನ್ನೇ ದೂಡಿ ಹಾಕಿದರು..!! ಕೊನೆಗೆ ಲಘು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಬೇಕಾಯಿತು.
ಸಿ.ಎಂ ಸಿದ್ಧರಾಮಯ್ಯ ಈ ಹಿಂದೆಯೂ ಹಲವು ಬಾರಿ ಜಿಲ್ಲೆಗೆ ಬಂದಿದ್ದಾರೆ. ಇಂತಹ ಸಮಸ್ಯೆಗಳು ನಡೆದೇ ಇಲ್ಲ.
ಆದರೆ ರವಿವಾರ ಕಾಂಗ್ರೇಸ್ ಕಾರ್ಯರ್ತರು ನಡೆಸಿದ ಡೊಂಬರಾಟ ಹಾಗು ಇದನ್ನು ತಡೆಯಲು ವಿಫಲರಾದ ಪೋಲೀಸ್ ಇಲಾಖೆಯ ಜವಾಬ್ದಾರಿಯನ್ನು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಯಾವುದೇ ಪೂರ್ವಭಾವಿ ಯೋಜನೆ- ಯೋಚನೆ ಇಲ್ಲದೆ ಪೋಲಿಸ್ ಅಧಿಕಾರಿಗಳು ಇಲ್ಲಿ ಎಡವಿದರೇ ?
ಮುಖ್ಯಮಂತ್ರಿಯ ಜೊತೆಗೆ ಸಾರ್ವಜನಿಕರಿಗೂ ತೊಂದರೆಯನ್ನುಂಟು ಮಾಡಿದ ಪೋಲೀಸ್ ಇಲಾಖೆ ಇಂತಹ ಕಾರ್ಯಕ್ರಮಗಳಿಗೆ ಸ್ವಲ್ಪ ಹೆಚ್ಚಿನ ಹೋಮ್ ವರ್ಕ್ ಮಾಡಿಕೊಂಡು ಬರುವ ಅಗತ್ಯವಿದೆ.
ಸಿಎಂ ಭೇಟಿಯನ್ನೇ ನಿಭಾಯಿಸಲಾಗದ ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ಅಕ್ಟೋಬರ್ 29 ರಂದು ಪ್ರಧಾನ ಮಂತ್ರಿ ಬರುವ ಸಂದರ್ಭದಲ್ಲಿ ಹೇಗೆ ವರ್ತಿಸಬಹುದು ಎನ್ನುವುದನ್ನು ಯೋಚಿಸುವಾಗಲೇ ಚಳಿಯಲ್ಲೂ ಬೆವರಿಳಿಯುವಂತ ಅನುಭವವಾಗುತ್ತಿದೆ.