DAKSHINA KANNADA
30 ರೂಪಾಯಿಗೆ ಇಳಿದ ಕೋಳಿ ಬೆಲೆ
30 ರೂಪಾಯಿಗೆ ಇಳಿದ ಕೋಳಿ ಬೆಲೆ
ಸುಳ್ಯ ಮಾ.13: ಕರೋನಾ ವೈರಸ್ ನ ನೇರ ಪರಿಣಾಮ ಕುಕ್ಕುಟೋದ್ಯಮದ ಮೇಲಾಗಿದೆ.ಒಂದೆಡೆ ಕರೋನಾ ವೈರಸ್ ಕಾಟ ಇನ್ನೊಂದೆಡೆ ಹಕ್ಕಿ ಜ್ವರದ ಪರಿಣಾಮ ಕೋಳಿ ಮಾಂಸದ ಬೇಲೆ 140 ಇದ್ದದ್ದು ಈಗ ಏಕಾಏಕಿ 30 ರೂಪಾಯಿಗೆ ಕುಸಿದಿದೆ.
ಸುಳ್ಯದ ಕೋಳಿ ಅಂಗಡಿಯೊಂದರಲ್ಲಿ ಕೋಳಿ ಮಾಂಸ ಕೆಜಿಗೆ 30 ರೂಪಾಯಿ ಎಂದು ಬೋರ್ಡ್ ಹಾಕಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದುವರೆಗೆ ಕರೊನಾ ವೈರಸ್ ಅಥವಾ ಹಕ್ಕಿಜ್ವರ ಎಲ್ಲೂ ಪತ್ತೆಯಾಗಿಲ್ಲ. ಆದರೂ ಜನತೆ ಆತಂಕಕ್ಕೀಡಾಗಿದ್ದು, ಕೋಳಿ ಸಾಕಣಿಕೆಯನ್ನೇ ನಂಬಿಕೊಂಡಿರುವ ನೂರಾರು ಮಂದಿ ಅತಂತ್ರರಾಗಿದ್ದಾರೆ.
ಮಂಗಳೂರಿನಲ್ಲಿ ಬ್ರಾಯ್ಲರ್ ಕೋಳಿ ದರ ಕೆ.ಜಿ. ವಿತ್ ಸ್ಕಿನ್ 160 ರೂ.ನಿಂದ 100 ರೂ., ವಿದೌಟ್ ಸ್ಕಿನ್ 180 ರೂ.ನಿಂದ 120 ರೂ.ಗೆ ಇಳಿಕೆಯಾಗಿದೆ. ಟೈಸನ್ 160 ರೂ.ನಿಂದ 100ಕ್ಕೆ ಕುಸಿದಿದೆ. ಕೇರಳ ಕರ್ನಾಟಕ ಗಡಿಪ್ರದೇಶವಾದ ಪುತ್ತೂರು ತಾಲೂಕಿನ ಈಶ್ವರಮಂಗಲ ಭಾಗದಲ್ಲಿ 20-30 ರೂ, ಸುಳ್ಯದಲ್ಲಿ 30ರಿಂದ 40 ರೂ.ಗೆ ಬ್ರಾಯ್ಲರ್ ಕೋಳಿ ಮಾಂಸ ಸಿಗುತ್ತಿದೆ. ಪುತ್ತೂರು 40ರಿಂದ 55 ರೂ, ಬೆಳ್ತಂಗಡಿ 45ರಿಂದ 80, ಉಡುಪಿಯಲ್ಲಿ 40ರಿಂದ 60, ಕುಂದಾಪುರ 40, ಮೂಲ್ಕಿ 60, ಕಡಬ, ಪಡುಬಿದ್ರಿ 50, ಮೂಡುಬಿದಿರೆ 35ರಿಂದ 70, ಉಳ್ಳಾಲ 35ರಿಂದ 40, ಸುರತ್ಕಲ್ 60.. ಹೀಗೆ ಸಾಗುತ್ತದೆ ಪ್ರತಿ ಕಿಲೋ ಬ್ರಾಯ್ಲರ್ ಕೋಳಿ ಮಾಂಸದ ಧಾರಣೆ.
ಕೇರಳದ ಕ್ಯಾಲಿಕಟ್‌ನಲ್ಲಿ ಹಕ್ಕಿಜ್ವರ ಪತ್ತೆಯಾಗಿರುವುದನ್ನು ಕೇರಳ ಸರ್ಕಾರ ದೃಢಪಡಿಸಿತ್ತು. ಇದರಿಂದ ಕೇರಳದ ಕುಕ್ಕುಟೋದ್ಯಮದಲ್ಲಿ ಒಂದು ರೀತಿಯ ಭಯ ಆವರಿಸಿತ್ತು. ಆದರೆ ದ.ಕ. ಜಿಲ್ಲೆಯಲ್ಲಿ ಹಕ್ಕಿಜ್ವರ ಪತ್ತೆಯಾಗಿಲ್ಲ. ಕರೊನಾ ಕೂಡ ಪತ್ತೆಯಾಗಿಲ್ಲ. ಆದರೆ ಜನರು ಭಯದಿಂದ ಕೋಳಿ ಮಾಂಸ ಖರೀದಿ ಮಾಡುತ್ತಿಲ್ಲ.
ಈಗ ದರ ಕಡಿತ ಮತ್ತು ಮಾರುಕಟ್ಟೆಯ ಹೊಡೆತದಿಂದ ಕೆಲವೆಡೆ ಕೋಳಿ ಸಾಕಣೆ ಕೇಂದ್ರಗಳಲ್ಲಿ ಉತ್ಪಾದನೆ ನಿಲ್ಲಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೋಳಿಯ ಲಭ್ಯತೆ ಕಡಿಮೆಯಾಗಿ ದರ ಮತ್ತೆ ಏರಬಹುದು ಎಂದು ಹೇಳಲಾಗುತ್ತಿದೆ.