LATEST NEWS
ಅಗಸ್ಟ್ 15 ರಿಂದ ಒಂದು ತಿಂಗಳು ಕಾಲ ಚಾರ್ಮಾಡಿ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧ
ಅಗಸ್ಟ್ 15 ರಿಂದ ಒಂದು ತಿಂಗಳು ಕಾಲ ಚಾರ್ಮಾಡಿ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧ
ಮಂಗಳೂರು ಅಗಸ್ಟ್ 14:ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ರಸ್ತೆ ತತ್ತರಿಸಿ ಹೋಗಿದೆ. ಕರಾವಳಿಯನ್ನು ಚಿಕ್ಕಮಗಳೂರು, ಹಾಸನ, ಬೆಂಗಳೂರು ಸೇರಿದಂತೆ ಘಟ್ಟ ಪ್ರದೇಶದ ಜೊತೆ ಬೆಸೆಯುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಹೆದ್ದಾರಿ 234ರ 25 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಚಾರ್ಮಾಡಿ ಘಾಟ್ ನಲ್ಲಿ ಮಳೆಯ ಅಬ್ಬರಕ್ಕೆ 60 ಕಡೆ ಭೂಕುಸಿತ ಸಂಭವಿಸಿದೆ.
ಈ ಹಿನ್ನಲೆಯಲ್ಲಿ ಚಾರ್ಮಾಡಿ ರಸ್ತೆ ದುರಸ್ತಿಗೆ ಒಂದು ತಿಂಗಳು ಕಾಲಾವಕಾಶ ಅಗತ್ಯವಿದ್ದು ಅಗಸ್ಟ್ 15 ರಿಂದ ಸೆಪ್ಟೆಂಬರ್ 14 ರವರೆಗೆ ಚಾರ್ಮಾಡಿ ಘಾಟ್ ನಲ್ಲಿ ಸಂಪೂರ್ಣ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 234ರ 25 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮಳೆಯ ಅಬ್ಬರಕ್ಕೆ 60 ಕಡೆ ಭೂಕುಸಿತ ಸಂಭವಿಸಿದೆ. ಸುಮಾರು 40 ಕಡೆಗಳಲ್ಲಿ ಸಾಮಾನ್ಯ ಪ್ರಮಾಣದ ಭೂಕುಸಿತ ಸಂಭವಿಸಿದೆ. ಮಣ್ಣು, ಕಲ್ಲು, ಮರಗಳು ರಸ್ತೆಯ ಮೇಲೆ ಉರುಳಿಬಿದ್ದಿವೆ. 20 ಸ್ಥಳಗಳಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು, ಕೆಲವೆಡೆ ಹೆದ್ದಾರಿಯ ಭಾಗವೇ ಪ್ರಪಾತಕ್ಕೆ ಜಾರಿದೆ.
ಗುಡ್ಡ ಕುಸಿತ ಪ್ರದೇಶದ ರಸ್ತೆಯಲ್ಲಿ ಬಿದ್ದಿದ್ದ ಮಣ್ಣು ತೆರವುಗೊಳಿಸಿ ದುರಸ್ತಿಗೊಳಿಸಿದರೂ ಮೇಲಿಂದ ಮೇಲೆ ಗುಡ್ಡ ಕುಸಿಯುತ್ತಿರುವ ಅವಘಡಗಳು ಸಂಭವಿಸುತ್ತಿವೆ. ಈ ನಡುವೆ ಚಾರ್ಮಾಡಿಯಲ್ಲಿ ಆಗಾಗ ಸಂಚಾರ ನಿಷೇಧಿಸಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿತ್ತು. ಘಾಟ್‌ನಲ್ಲಿ ಕೆಲವು ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ರಸ್ತೆಗಳು ಕುಸಿದು ಬಿದ್ದಿವೆ. ಹೀಗಾಗಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಚಾರ್ಮಾಡಿ ಘಾಟ್‌ನಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದು, ಬದಲಿ ಮಾರ್ಗದ ಮೂಲಕ ವಾಹನಗಳು ಸಂಚರಿಸಲು ಜಿಲ್ಲಾಡಳಿತ ಸೂಚನೆ ಹೊರಡಿಸಿದೆ.
ರಾ.ಹೆ.73 ಮಂಗಳೂರು-ವಿಲ್ಲುಪುರಂ ರಸ್ತೆಯ ಚಾರ್ಮಾಡಿ ಘಾಟ್ ಭಾಗದಲ್ಲಿ 76 ಕಿ.ಮೀ. ನಿಂದ 86.20 ಕಿ.ಮೀ.ವರೆಗೆ (ದ.ಕ. ಜಿಲ್ಲಾ ಗಡಿ) ವಾಹನ ಸಂಚಾರ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ.
1. ಉಜಿರೆ- ಧರ್ಮಸ್ಥಳ- ಕೊಕ್ಕಡ- ಗುಂಡ್ಯ- ಶಿರಾಡಿ (ರಾ.ಹೆ.75) ಮುಖಾಂತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
2. ಮೂಡಿಗೆರೆ ಹ್ಯಾಂಡ್ ಪೋಸ್ಟ್- ಜನ್ನಾಪುರ- ಆನೆಮಹಲ್- ಶಿರಾಡಿ- ಗುಂಡ್ಯ (ರಾ.ಹೆ. 75) ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.