LATEST NEWS
ಚಾರ್ಮಾಡಿಯಲ್ಲಿ ಸಿಕ್ಕಿ ಹಾಕಿಕೊಂಡ ಮತ್ತೊಂದು ಲಾರಿ…ಚೆಕ್ ಪೋಸ್ಟ್ ನಲ್ಲಿ ಪೊಲೀಸರ ನಿದ್ರೆ…?
ಚಿಕ್ಕಮಗಳೂರು ಎಪ್ರಿಲ್ 04: ಚಾರ್ಮಾಡಿ ಘಾಟ್ ನಲ್ಲಿ ಇದೀಗ ಮತ್ತೊಂದು ಲಾರಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದ್ದು, ಮತ್ತೆ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದು, ಕೊಟ್ಟಿಗೆಹಾರ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಇದ್ದಾರೋ? ಇಲ್ಲವೋ? ಇದ್ದರೆ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸ್ಥಳಿಯರು ಹಾಗೂ ಸಾರ್ವಜನಿಕರನ್ನು ಕಾಡುತ್ತಿದೆ.
ಕಳೆದ ಮಾರ್ಚ್ 18ರಂದು ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ 16 ಚಕ್ರದ ಸಿಮೆಂಟ್ ಲಾರಿ ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಲಾಕ್ ಆಗಿ ಮಂಗಳೂರು ಹಾಗೂ ಚಿಕ್ಕಮಗಳೂರು ಎರಡೂ ಮಾರ್ಗದಲ್ಲೂ ಮೂರ್ನಾಲ್ಕು ಕಿ.ಮೀ.ನಷ್ಟು ದೂರ ಟ್ರಾಫಿಕ್ ಜಾಮ್ ಆಗಿತ್ತು. ಇಂದು ಮತ್ತೆ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ 12 ಚಕ್ರದ ಲಾರಿ ಲಾಕ್ ಆಗಿದೆ.
ರಸ್ತೆಯ ತಿರುವಿನಲ್ಲಿ ಲಾರಿ ಟರ್ನ್ ಆಗದೇ ನಿಂತಲ್ಲಿ ನಿಂತಿದೆ. ಬೆಳಗ್ಗೆಯಿಂದಲೂ ಕೂಡ ಚಾರ್ಮಾಡಿ ಘಾಟಿಯಲ್ಲಿ ವಾಹನಗಳು ನಿಂತಲ್ಲೇ ನಿಂತು ಮುಂದೆ ಹೋಗಲಾಗದೇ ಹಿಂದೆಯೂ ಬರಲಾಗದೇ ಪರದಾಡುವಂತೆ ಆಗಿದೆ. ಬಳ್ಳಾರಿಯಿಂದ ಸರಕನ್ನು ತುಂಬಿಕೊಂಡು ಮಂಗಳೂರಿಗೆ ಹೋಗುತ್ತಿದ್ದ ಲಾರಿ ಚಾರ್ಮಾಡಿ ಘಾಟಿಯಲ್ಲಿ ಲಾಕ್ ಆಗಿರುವುದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಸರ್ಕಾರದ ಅಧಿಕೃತ ಆದೇಶವಿದ್ದರೂ ಕೂಡ ಪೊಲೀಸರೇ ಲಾರಿಗಳನ್ನು ಬಿಡುತ್ತಿದ್ದಾರೆ ಎಂದು ಸ್ಥಳೀಯರು ಹಾಗೂ ವಾಹನ ಸವಾರರು ಆರೋಪಿಸಿದ್ದಾರೆ.