BELTHANGADI
ಬಿರುಕು ಬಿಟ್ಟ ಚಾರ್ಮಾಡಿ ಘಾಟ್ ರಸ್ತೆ – ಸಂಚಾರ ಬಂದ್

ಬೆಳ್ತಂಗಡಿ ಅಗಸ್ಟ್ 7: ಕರಾವಳಿ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿಯೇ ಇದ್ದು, ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಗೆ ಹಲವೆಡೆ ಪ್ರಕೃತಿ ವಿಕೋಪಗಳು ಉಂಟಾಗುತ್ತಿದ್ದು, ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 234 ರ ಮಧ್ಯ ಅಲೇಖಾನ್ ಸಮೀಪ ಘಾಟ್ ರಸ್ತೆ ಬಿರುಕು ಬಿಟಿದ್ದು ಚಾರ್ಮಾಡಿ ಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ಪರಿಣಾಮ ರಸ್ತೆಗೆ ಬಿದ್ದಿರುವ ಬೃಹತ್ ಗಾತ್ರದ ಬಂಡೆಗಳು ಮತ್ತು ಗುಡ್ಡ ಕುಸಿತಗೊಂಡ ಹಿನ್ನೆಲೆಯಲ್ಲಿ ರಸ್ತೆಗೆ ಮಣ್ಣು ಬಿದ್ದಿದೆ. ಇದರಿಂದ ರಸ್ತೆ ಎರಡು ಭಾಗ ಆಗುವ ಸಾಧ್ಯತೆ ಇದೆ.

ರಸ್ತೆ ಮಧ್ಯೆ ಮಣ್ಣು ಬಿದ್ದಿರುವುದರಿಂದ ಕೊಟ್ಟಿಗೆಹಾರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಭಾರೀ ಮಳೆಯ ಮಧ್ಯೆಯೂ ವಾಹನಗಳು ಸಾಲುಗಟ್ಟಿ ನಿಂತಿವೆ. ಇದರಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮತ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸಿಗರು ಚಾರ್ಮಾಡಿ ಘಾಟ್‍ನಲ್ಲಿ ಸಂಚರಿಸದಂತೆ ಪೊಲೀಸರ ಸೂಚನೆ ನೀಡಿದ್ದಾರೆ.