MANGALORE
ಕೃಷಿ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ : ಅಭಯಚಂದ್ರ ಜೈನ್
ಕೃಷಿ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ : ಅಭಯಚಂದ್ರ ಜೈನ್
ಮೂಡುಬಿದಿರೆ, ಡಿಸೆಂಬರ್ 01: ಕೃಷಿ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ ಎಂದು ಮಾಜಿ ಸಚಿವ ಹಾಗೂ ಶಾಸಕರಾದ ಅಭಯಚಂದ್ರ ಜೈನ್ ಹೇಳಿದ್ದಾರೆ.
ಜೈನ ಕಾಶಿ ಮೂಡಬಿದಿರೆಯಲ್ಲಿ ಆಳ್ವಾಸ್ ನುಡಿಸಿರಿ 2017ರ ಪ್ರಯುಕ್ತ ನಡೆದ ಆಳ್ವಾಸ್ ಕೃಷಿಸಿರಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
`ಹಿಂದಿನ ಹಾಗೂ ಇಂದಿನ ಕೃಷಿವ್ಯವಸ್ಥೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ.
ಕೃಷಿ ಬದುಕಿನ ನೋವು ನಲಿವುಗಳು ಒಬ್ಬ ಕೃಷಿಕನಿಗೆ ಮಾತ್ರ ಗೊತ್ತಾಗಲು ಸಾಧ್ಯ. ಕೃಷಿಯಲ್ಲಿ ಲಾಭವೂ ಇದೆ, ನಷ್ಟವೂ ಇದೆ.
ಎಷ್ಟೋ ಸಲ ನಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ ಹಾಗಾದಾಗ ಕೃಷಿಕ ತೀವ್ರ ನಷ್ಟವನ್ನು ಅನುಭವಿಸುವಂತಾಗುತ್ತದೆ. ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಹಿಡಿಯಬೇಕು’ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೃಷಿಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ವಿಶ್ಲೇಷಿಸಿದರು.
`ಕಳೆದ 10 ವರ್ಷಗಳಲ್ಲಿ 100 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಿಕ್ಕಟ್ಟಿನ ಬಗ್ಗೆ ಸೂಕ್ತ ಸಂಶೋಧನೆಗಳಾಗಬೇಕಿದೆ. ನಮ್ಮ ರೈತಾಪಿ ವರ್ಗ ಇಂದು ಭರವಸೆಯ ಕೊರತೆಯನ್ನು ಎದುರಿಸುತ್ತಿದೆ.
ಆ ಕೊರತೆಯನ್ನು ನೀಗುವ ಕೆಲಸವಾಗಬೇಕಿದೆ. ಇಂದು ಸರಕಾರ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆಂದರೂ ರೈತರು ಅದರಿಂದ ಉತ್ತೇಜಿತರಾಗಿಲ್ಲ.
ಈ ಕೊರತೆ ಕೃಷಿ ಕ್ಷೇತ್ರವನ್ನು ತೀವ್ರವಾಗಿ ಬಾಧಿಸುತ್ತಿದೆ’ ಎಂದರು.ಮಾಜಿ ಸಚಿವ ಅಮರನಾಥ ಶೆಟ್ಟಿ ಉದ್ಘಾಟಿಸಿದರು.
ಮುಂಡ್ರುದೆಗುತ್ತು ರಾಮಮೋಹನ ರೈ ಕೃಷಿ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಪಂಚದೀವಟಿಗೆಗಳನ್ನು ಬೆಳಗಿಸುವ ಮೂಲಕ ಹಾಗೂ ತೆಂಗು ಹೂವನ್ನು ಅರಳಿಸುವದರ ಮೂಲಕ ಕೃಷಿಸಿರಿಗೆ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು.
ಕೃಷಿಸಿರಿಯ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರಕುಮಾರ್ ವಹಿಸಿದ್ದರು.
ಕೃಷಿಯಲ್ಲಿ ಪ್ರಯೀಗಾತ್ಮಕ ಚಿಂತನೆಗಳ ಅಳವಡಿಕೆ, ಅನುಭವ ವಿನಿಮಯದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಸಚಿವ ಅಮರನಾಥ ಶೆಟ್ಟಿ, ಸಂಸ್ಥೆಯ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ, ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ವೇಣುಗೋಪಾಲ್, ಪಶುಸಂಗೋಪನಾ ಇಲಾಖೆಯ ಡಾ. ಆನಂದ, ಮೂಡುಬಿದಿರೆಯ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಕರ್ನಾಟಕ ರಾಜ್ಯ ರೈತ ಸಂಘದ ವಲಯಾಧ್ಯಕ್ಷ ಧನಕೀರ್ತಿ ಬಲಿಪ, ಕ.ಸಾ.ಪ.ನ ಮಾಜ ಅಧ್ಯಕ್ಷ ಹರಿಕೃಷ್ಣ ಪುನರೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.