KARNATAKA
ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆ ವಿರುದ್ದ ಅಸಮಧಾನ ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಸಚಿವ ಜೆ.ಸಿ.ಮಾಧುಸ್ವಾಮಿ

ಮೈಸೂರು: ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ವಿರುದ್ದ ಪಕ್ಷದ ಸಚಿವರೊಬ್ಬರು ಅಸಮಧಾನ ಹೊರ ಹಾಕಿದ್ದು, ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಒಕ್ಕೂಟ ವ್ಯವಸ್ಥೆ ಸಡಿಲಗೊಳ್ಳುತ್ತಿದ್ದು, ಪ್ರಾದೇಶಿಕ ಕೂಗಿಗೆ ನಾಂದಿಯಾಡುತ್ತದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರವು ಮನೆಯ ಹಿರಿಯ ಸದಸ್ಯನಂತೆ ವರ್ತಿಸದೇ ರಾಜ್ಯದ ವಿಷಯಗಳಿಗೆ ಕೈ ಹಾಕುತ್ತಿದೆ. ಸಂಪನ್ಮೂಲವನ್ನು ಸಮಾನವಾಗಿ ಹಂಚಿಕೆ ಮಾಡುವಲ್ಲಿ ವಿಫಲವಾಗಿದೆ. ಕೇಂದ್ರದ ಈ ಧೋರಣೆಯಿಂದಾಗಿ ಪ್ರಾದೇಶಿಕತೆಯ ಕಾವು ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ರಾಜ್ಯದ ಉದ್ಯೋಗಗಳಲ್ಲಿ ಉತ್ತರ ಭಾರತದವರೇ ತುಂಬಿದ್ದಾರೆ ಎಂದ ಅವರು, ನಮ್ಮ ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಂಡು ನಮ್ಮವರಿಗೆ ಉದ್ಯೋಗ ಇಲ್ಲದಂತಾಗಿದೆ ಎಂದರು. ಕೇಂದ್ರ ಸರಕಾರಕ್ಕೂ, ನೀಟ್ ಪರೀಕ್ಷೆಗೂ ಏನು ಸಂಬಂಧ? ಇದು ನಮ್ಮ ರಾಜ್ಯಕ್ಕೆ ಏಕೆ ಬೇಕು? ನಾವುಗಳು ಬಂಡವಾಳ ಹಾಕಿ ವೈದ್ಯಕೀಯ ಕಾಲೇಜು ಸ್ಥಾಪಿಸಿ ಉತ್ತರ ಭಾರತದವರಿಗೆ ಕೆಂಪು ಹಾಸಿಗೆ ಹಾಕಿ ಏಕೆ ಎಂಬಿಬಿಎಸ್ ಸೀಟ್ ಕೊಡಬೇಕು? ಇದರಿಂದ ಕನ್ನಡದ ಮಕ್ಕಳಿಗೆ ಅನ್ಯಾಯವಾಗುವುದಿಲ್ಲವೇ? ಇದರ ಪರಿಣಾಮವನ್ನು ಭವಿಷ್ಯದಲ್ಲಿಎದುರಿಸಬೇಕಾಗುತ್ತದೆ.ಈ ಅನ್ಯಾಯವನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‌ನ ವೈದ್ಯರು ಸಾಯುವ ಸ್ಥಿತಿ ಬರಲಿದೆ,” ಎಂದು ಎಚ್ಚರಿಕೆ ನೀಡಿದರು. ಈ ಕುರಿತು ಸಂಸತ್‌ನಲ್ಲಿದನಿ ಎತ್ತಬೇಕೆಂದು ವೇದಿಕೆಯಲ್ಲಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಸಲಹೆ ನೀಡಿದರು.
ಆದರೆ ವೇದಿಕೆಯಲ್ಲಿದ್ದ ಸಂಸದ ತೇಜಸ್ವಿ ಸೂರ್ಯ, ರವಿಕುಮಾರ್ ಅವರು ಮತ್ತೆ ತಮ್ಮದೇ ದಾಟಿಯಲ್ಲಿ ಕೇಂದ್ರ ಸರಕಾರವನ್ನು ಸಮರ್ಥಿಸಿಕೊಂಡರು.