LATEST NEWS
ಅತಿವೃಷ್ಟಿ ಹಾನಿ ವರದಿ ಸಮಗ್ರವಾಗಿ ನೀಡುವ ಭರವಸೆ – ಕೇಂದ್ರ ಅಧಿಕಾರಿಗಳ ಸಮಿತಿ

ಅತಿವೃಷ್ಟಿ ಹಾನಿ ವರದಿ ಸಮಗ್ರವಾಗಿ ನೀಡುವ ಭರವಸೆ – ಕೇಂದ್ರ ಅಧಿಕಾರಿಗಳ ಸಮಿತಿ
ಮಂಗಳೂರು ಸೆಪ್ಟಂಬರ್ 12 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಿಂದ ಸಂಭವಿಸಿದ ನಾಶ ನಷ್ಟಗಳನ್ನು ಸ್ಥಳ ಭೇಟಿಯ ವೇಳೆ ಕಂಡಿದ್ದು, ಹಾನಿ ವರದಿಯನ್ನು ಸಮಗ್ರವಾಗಿ ನೀಡುವ ಭರವಸೆಯನ್ನು ಸಮಿತಿಯು ನೀಡಿತು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಲ್ಕಿ ವ್ಯಾಪ್ತಿಯ ಪ್ರದೇಶಗಳ ಭೇಟಿಯ ಬಳಿಕ ಅಧಿಕಾರಿಗಳ ಸಭೆ ನಡೆಸಿದ ತಂಡಕ್ಕೆ ಜಿಲ್ಲೆ ಪ್ರಸಕ್ತ ಮಳೆಗಾಲದಲ್ಲಿ ಅನುಭವಿಸಿದ ಸಮಸ್ಯೆಗಳನ್ನು ಹಾಗೂ ಜಿಲ್ಲೆಯು ಸಮರ್ಥವಾಗಿ ಸವಾಲು ಎದುರಿಸಿದ ರೀತಿಯನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಪಿಪಿಟಿ ಮೂಲಕ ವಿವರಿಸಿದರು.

ಅತಿವೃಷ್ಠಿಯ ವೇಳೆ 14 ಕ್ಯಾಂಪ್‍ಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು, 11 ಜೀವಹಾನಿ ಮತ್ತು 1770 ಮನೆ ಹಾನಿಗಳಿಗೆ ಪ್ರಾಕೃತಿಕ ವಿಕೋಪ ನಿಧಿಯಡಿ ನಿಯಮಾನುಸಾರ ಪರಿಹಾರವನ್ನು ನೀಡಲಾಗಿದೆ ಎಂದೂ ಜಿಲ್ಲಾಧಿಕಾರಿಗಳು ವಿವರಿಸಿದರು.
ಒಟ್ಟು 213 ಕೋಟಿ ರೂ.ಗಳ ನಷ್ಟದ ಪ್ರಸ್ತಾಪವನ್ನು ಈಗಾಗಲೇ ಸಲ್ಲಿಸಲಾಗಿದ್ದು, ಮೂಲಭೂತ ಸೌಕರ್ಯಗಳ ಮರುನಿರ್ಮಾಣಕ್ಕೆ ಅನುದಾನ ಅತ್ಯಗತ್ಯವಾಗಿದೆ ಎಂದ ಜಿಲ್ಲಾಧಿಕಾರಿ, ತೋಟಗಾರಿಕಾ ಬೆಳೆ ಹಾನಿಯಿಂದ ಅದರಲ್ಲೂ ಮುಖ್ಯವಾಗಿ ಅಡಿಕೆ ಬೆಳೆ ನಾಶದಿಂದ ಗ್ರಾಮೀಣ ಭಾಗದ ರೈತರು ಕಂಗೆಟ್ಟಿದ್ದು ಸುಮಾರು 39,000 ಹೆಕ್ಟೆರ್ ತೋಟಗಾರಿಕಾ ಬೆಳೆ ನಾಶವಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯ ಬಹುದೊಡ್ಡ ಬೇಡಿಕೆ ಅಡಿಕೆ ಬೆಳೆಗೆ ಪರಿಹಾರ ನೀಡಬೇಕೆಂಬುದಾಗಿದ್ದು, ಕಾಳುಮೆಣಸು ಮತ್ತು ತೆಂಗಿನ ಬೆಳೆ ಹಾಗೂ ಇತರ ಬೆಳೆಗಳಿಗೂ ಹಾನಿ ಸಂಭವಿಸಿದೆ ಎಂದರು.
ಈಗಾಗಲೇ 340 ಲಕ್ಷ ರೂ. ಪರಿಹಾರ ಗ್ರಾಮೀಣ ರಸ್ತೆಗಳ ದುರಸ್ತಿಗೆ ಪ್ರಾಕೃತಿಕ ವಿಕೋಪದಡಿ ನೀಡಲಾಗಿದೆ. ಮೆಸ್ಕಾಂಗೆ ಆರು ಕೋಟಿ ರೂ.ಗಳ ನಷ್ಟವಾಗಿದೆ. ಇದೆಲ್ಲವುಗಳ ಜೊತೆಗೆ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿರುವುದರಿಂದ ಮನೆಗಳ ಹಾನಿ ಗಮನೀಯವಾಗಿತ್ತು ಎಂದು ಜಿಲ್ಲಾಧಿಕಾರಿಗಳು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿದರು.
ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ವಿಭಾಗದ ಉಪಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್ ಮತ್ತು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ಅವರಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್ ಅವರನ್ನೊಳಗೊಂಡಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅತಿವೃಷ್ಠಿ, ಪ್ರವಾಹದಿಂದ ಸಂಭವಿಸಿದ ಹಾನಿ ಕುರಿತ ಪರಿಶೀಲನೆಗೆ ಆಗಮಿಸಿರುವ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳ ಅಧ್ಯಯನ ತಂಡ ಇಂದು ಮುಲ್ಕಿ ಹೋಬಳಿಯಲ್ಲಿ ಪಂಜ, ಕಿಲಿಂಜಾರು, ಅದ್ಯಪಾಡಿ, ಮಳವೂರು ಪ್ರದೇಶಗಳಿಗೆ ಭೇಟಿ ನೀಡಿ ನೆರೆನೀರಿನಿಂದ ಸಂಭವಿಸಿದ ಕೃಷಿ ಹಾನಿಯನ್ನು ಪರಿಶೀಲಿಸಿತು.