LATEST NEWS
ಅತಿವೃಷ್ಠಿ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ- ಪರಿಶೀಲನೆ
ಅತಿವೃಷ್ಠಿ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ- ಪರಿಶೀಲನೆ
ಉಡುಪಿ, ಸೆಪ್ಟಂಬರ್ 12 : ಕರ್ನಾಟಕದ ಅತಿವೃಷ್ಠಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಪರಿಶೀಲಿಸಿ ವರದಿ ನೀಡಲು ಕೇಂದ್ರ ಸರಕಾರವು ಕಳುಹಿಸಿರುವ ಹಿರಿಯ ಅಧಿಕಾರಿಗಳ ತಂಡವು ಬುಧವಾರ ಉಡುಪಿ ಜಿಲ್ಲೆಗೆ ಆಗಮಿಸಿ, ಪರಿಶೀಲನೆ ನಡೆಸಿತು.
ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಉಪಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್ ಮತ್ತು ರಸ್ತೆ ಸಾರಿಗೆ, ಹೆದ್ದಾರಿ ಇಲಾಖೆಯ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ಅವರನ್ನೊಳಗೊಂಡ ನಿಯೋಗವು ಮಂಗಳೂರಿನಿಂದ ಕಾರ್ಕಳಕ್ಕೆ ಆಗಮಿಸಿತು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಕೇಂದ್ರ ತಂಡವನ್ನು ಸ್ವಾಗತಿಸಿದರು. ಜಿಲ್ಲೆಯ ವಿವಿದೆಡೆ ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದ ರಸ್ತೆ, ಮೂಲಸೌಕರ್ಯ, ಬೆಳೆಹಾನಿ ಸ್ಥಳಗಳಿಗೆ ಭೇಟಿ ನೀಡಿದ ಕೇಂದ್ರ ತಂಡವು ಮಾಹಿತಿ ಸಂಗ್ರಹಿಸಿತು.
ಮೊದಲು ಮಳೆಯಿಂದ ಹಾನಿಗೀಡಾದ ಕಾರ್ಕಳ ತಾಲೂಕಿನ ಕುಕ್ಕಂದೂರು ಜಯಂತಿನಗರ ಶಾಲೆಗೆ ಕೇಂದ್ರ ತಂಡವು ಭೇಟಿ ನೀಡಿ ವೀಕ್ಷಣೆ ನಡೆಸಿತು. ಅಲ್ಲಿಂದ ಮಳೆಯಿಂದ ಹಾನಿಗೀಡಾದ ಕಾರ್ಕಳ-ಉಡುಪಿ ರಸ್ತೆಯ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬಳಿಕ ಕೊಳೆರೋಗದಿಂದ ಹಾನಿಗೀಡಾದ ಮೀಯಾರು ಗ್ರಾಮದ ಅಡಕೆ ತೋಟಗಳಿಗೆ ಭೇಟಿ ನೀಡಿ, ಹಾನಿಗೀಡಾದ ಅಡಿಕೆ ಮತ್ತು ಅಡಿಕೆ ಮರಗಳನ್ನು ಪರಿಶೀಲಿಸಿತು. ಅಲ್ಲದೇ, ಅಡಕೆ ಬೆಳೆಗಾರರೊಂದಿಗೆ ಮಾತುಕತೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿತು. ಬೆಳೆ ವಿಮೆಯಿಂದ ರೈತರಿಗಾಗಿರುವ ಪ್ರಯೋಜನಗಳ ಬಗ್ಗೆಯೂ ಅಧಿಕಾರಿಗಳು ಮತ್ತು ಬೆಳೆಗಾರರಿಂದ ಮಾಹಿತಿ ಪಡೆಯಿತು.
ನಂತರ ಹೊಸ್ಮಾರಿಗೆ ಕೇಂದ್ರ ತಂಡ ಭೇಟಿ ನೀಡಿತು. ತೀವ್ರ ಮಳೆಯಿಂದ ಹಾನಿಗೀಡಾದ ಹೊಸ್ಮಾರು ಈದು ಸೇತುವೆ ಮತ್ತು ಸಂಪರ್ಕ ರಸ್ತೆಯನ್ನು ವೀಕ್ಷಿಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ಇಲ್ಲಿಂದ ನೂರಾಲ್ ಬೆಟ್ಟು ಗ್ರಾಮದ ಕಂಪೆಟ್ಟು ಎಂಬಲ್ಲಿ ಮಳೆಯಿಂದ ಹಾನಿಗೀಡಾದ ಗ್ರಾಮೀಣ ಸೇತುವೆ ಮತ್ತು ಕೊಚ್ಚಿಹೋದ ಸಂಪರ್ಕ ರಸ್ತೆಯ ತಾತ್ಕಾಲಿಕ ಕಾಮಗಾರಿಗಳನ್ನು ಪರಿಶೀಲನೆ ನಡೆಸಿತು.
ನೂರಾಲ್‍ಬೆಟ್ಟು ಗ್ರಾಮದ ತೀರಾ ಒಳ ಪ್ರದೇಶ ಲಾಂದೇಲು ಎಂಬಲ್ಲಿ ಸಾರ್ವಜನಿಕರು ನಿತ್ಯ ಸಂಚರಿಸುವ ಕಾಲುಸಂಕವು ಮಳೆಯಲ್ಲಿ ಕೊಚ್ಚಿಹೋಗಿದ್ದು, ಈ ಪ್ರದೇಶಕ್ಕೆ ವಾಹನ ಸಂಚಾರ ಅಸಾಧ್ಯವಾಗಿದ್ದರಿಂದ ಸುಮಾರು 500 ಮೀಟರ್‍ನಷ್ಟು ಅಲ್ಲಿಗೆ ನಡೆದುಕೊಂಡೇ ಸಂಚರಿಸಿದ ಕೇಂದ್ರ ತಂಡದ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು, ಹಾನಿಗೀಡಾದ ಕಾಲುಸಂಕವನ್ನು ವೀಕ್ಷಿಸಿದರು.
ಅಪರಾಹ್ನ ಕೇಂದ್ರ ತಂಡವು ಶಿರ್ವ ಸಮೀಪದ ಕಳತ್ತೂರು ಗುರ್ಮೆಗೆ ಭೇಟಿ ನೀಡಿ ಮಳೆಯಿಂದ ಹಾನಿಗೀಡಾದ ಸೇತುವೆ ಸಂಪರ್ಕ ರಸ್ತೆಯನ್ನು ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯಿತು.