DAKSHINA KANNADA
ಕೇಂದ್ರ ಸರಕಾರದ ಯೋಜನೆಗಳ ಬಳಕೆಯಲ್ಲಿ ಮಾದರಿಯಾದ ಸಂಪಾಜೆ ಗ್ರಾಮಪಂಚಾಯತ್
ಸುಳ್ಯ : ನಗರಗಳಲ್ಲಿ ಎಲ್ಲಾ ಪ್ರದೇಶಗಳಲ್ಲಿ ಸಿಸಿಟಿವಿ ಆಳವಡಿಸಲು ಹೆಣಗಾಡುತ್ತಿರುವ ವೇಳೆ , ಗ್ರಾಮಪಂಚಾಯತ್ ಒಂದು ತನ್ನ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾ ಇಡುವ ಮೂಲಕ ಮಾದರಿ ಗ್ರಾಮಪಂಚಾಯತ್ ಆಗಿ ಮೂಡಿಬಂದಿದೆ.
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮಪಂಚಾಯತ್ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ನಿರಂತರ ಕಣ್ಗಾವಲನ್ನು ಇಡುತ್ತಿದೆ. ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ಈ ಗ್ರಾಮಪಂಚಾಯತ್ ತನ್ನ ವ್ಯಾಪ್ತಿಗೆ ಬರುವ ಕಲ್ಲುಗುಂಡಿ,ಸಂಪಾಜೆ ಪೇಟೆಯ ತುಂಬಾ ಸಿಸಿ ಕ್ಯಾಮಾರಾಗಳನ್ನು ಅಳವಡಿಸುವ ಮೂಲಕ ಎಲ್ಲಾ ಚಲನವಲನಗಳನ್ನು ನಿಯಂತ್ರಿಸುತ್ತಿದೆ.
ಅತ್ಯಂತ ಮಾದರಿ ಗ್ರಾಮಪಂಚಾಯತ್ ಎಂದು ಗುರುತಿಸಿಕೊಂಡಿರುವ ಈ ಪಂಚಾಯತ್ ತನ್ನ ಕಛೇರಿ ಸೇರಿದಂತೆ ಪಂಚಾಯತ್ ಆಡಳಿತಕ್ಕೆ ಬರುವ ಎಲ್ಲಾ ಸೊತ್ತುಗಳನ್ನೂ ಯಶಸ್ವಿಯಾಗಿ ನಿಭಾಯಿಸುವ ಮೂಲಕ ಉತ್ತಮ ಆದಾಯವನ್ನೂ ಪಡೆಯುತ್ತಿದೆ. ಪಂಚಾಯತ್ ಕಟ್ಟಡದಲ್ಲಿ ಕೆಳ ಅಂತಸ್ತಿನಲ್ಲಿ ಪಂಚಾಯತ್ ಕಛೇರಿಯಿದ್ದರೆ, ಮೇಲಿನ ಅಂತಸ್ತಿನಲ್ಲಿ ಸುಸಜ್ಜಿತವಾದ ಗ್ರಂಥಾಲಯವನ್ನು ನಡೆಸುತ್ತಿದೆ. ಪಂಚಾಯತ್ ನ ಈ ಗ್ರಂಥಾಲಯದಲ್ಲಿ ಐದು ಸಾವಿರಕ್ಕೂ ಮಿಕ್ಕಿದ ವಿವಿಧ ಬಗೆಯ ಪುಸ್ತಕಗಳಿದ್ದು, ಪುಸ್ತಕ ಓದುವವರಿಗಾಗಿ ಆಸನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಎಲ್ಲಾ ವ್ಯವಸ್ಥೆಗಳ ನಡುವೆ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಈ ಪಂಚಾಯತ್ ವಿದ್ಯಾರ್ಥಿಗಳಿಗಾಗಿ ಮಾಡಿದ ಸೇವೆಯು ಎಲ್ಲರ ಮೆಚ್ಚುಗೆಯನ್ನೂ ಪಡೆದುಕೊಂಡಿದೆ.
ಅತ್ಯಂತ ಹೆಚ್ಚು ಹಿಂದುಳಿದ ಪ್ರದೇಶಗಳನ್ನು ಹೊಂದಿರುವ ಸಂಪಾಜೆ ಗ್ರಾಮಪಂಚಾಯತ್ ನ ಹಲವೆಡೆ ಮೊಬೈಲ್ ನೆಟ್ವರ್ಕ್ ಸಮಸ್ಯೆ ತೀರಾ ಹೆಚ್ಚಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಆನ್ ಲೈನ್ ಶಿಕ್ಷಣವನ್ನು ಪಡೆಯಬೇಕಾದ ಅನಿವಾರ್ಯತೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಗ್ರಾಮಪಂಚಾಯತ್ ನಲ್ಲಿ ಆಶ್ರಯ ನೀಡುವ ಮೂಲಕ ನೆರವಾಗಿತ್ತು. ಈ ಪಂಚಾಯತ್ ನ ಸಂಜೀವಿನಿ ಗುಂಪುಗಳ ಸದಸ್ಯರಿಗೆ ಹೊಲಿಯುವ ಯಂತ್ರಗಳನ್ನು ವಿತರಿಸಿ, ಆ ಸದಸ್ಯರಿಗೆ ತಮ್ಮದೇ ಕಟ್ಟಡದಲ್ಲಿ ಕೆಲಸ ನಿರ್ವಹಿಸಲು ಬೇಕಾದ ವ್ಯವಸ್ಥೆಗಳನ್ನೂ ಮಾಡಿಕೊಟ್ಟಿದೆ.
ಕಛೇರಿ, ಅಂಗನವಾಡಿ, ಸಭಾಂಗಣ, ಅತಿಥಿ ಗೃಹ ಹೀಗೆ ಹಲವು ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿರುವ ಸಂಪಾಜೆ ಪಂಚಾಯತ್ ಈ ಮೂಲಕ ಉತ್ತಮ ಆದಾಯವನ್ನೂ ಪಡೆಯುತ್ತಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗಾಗಿ ಹೊಸ ವಾಹನವನ್ನೂ ಖರೀದಿಸಲಾಗಿದ್ದು, ಪಂಚಾಯತ್ ನ ಈ ಕಾರ್ಯವೈಖರಿಗೆ ರಾಷ್ಟ್ರೀಯ ಪ್ರಶಸ್ತಿಗಳೂ ಸಂದಿವೆ. ಎರಡು ಬಾರಿ ಕೇಂದ್ರ ಸರಕಾರದ ಗಾಂಧೀ ಗ್ರಾಮ ಪುರಸ್ಕಾರ ಪ್ರಶಸ್ತಿಯೂ ಲಭಿಸಿರುವುದು ಸಂಪಾಜೆ ಗ್ರಾಮಪಂಚಾಯ್ ಆಡಳಿತ ವೈಖರಿಯ ಸೇವೆಗೆ ಸಾಕ್ಷಿಯಂತಿದೆ.