DAKSHINA KANNADA
ಸಿಸಿಬಿ ಕಾರ್ಯಾಚರಣೆ: ಅಕ್ರಮ ಪಿಸ್ತೂಲ್ ಹೊಂದಿದ್ದ ಇಬ್ಬರ ಸೆರೆ
ಉಳ್ಳಾಲ, ಮೇ 21: ಅಕ್ರಮ ಶಸ್ತ್ರಾಸ್ತ್ರವಾದ ಪಿಸ್ತೂಲನ್ನು ವಶದಲ್ಲಿರಿಸಿಕೊಂಡಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಪಿಲಿಕೂರು ಪರಿಸರದಲ್ಲಿ ಇಬ್ಬರು ಕಪ್ಪು ಬಣ್ಣದ ಕಾರಿನಲ್ಲಿ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಾರಕಾಯುಧ ಪಿಸ್ತೂಲ್ ಇಟ್ಟುಕೊಂಡು ಯಾವುದೋ ದುಷ್ಕೃತ್ಯ ನಡೆಸುವುದಕ್ಕಾಗಿ ತಿರುಗಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಬಂಧಿತರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮೊಹಮ್ಮದ್ ಅಸ್ಕರ್(26) ಮತ್ತು ಅಬ್ದುಲ್ ನಿಸಾರ್.ಕೆ(29) ಎನ್ನುವವರಾಗಿದ್ದಾರೆ. ಪಿಸ್ತೂಲ್, ಸಜೀವ ಮದ್ದುಗುಂಡುಗಳು, ಮೊಬೈಲ್ ಫೋನುಗಳು, ಹಾಗೂ ಕಪ್ಪು ಬಣ್ಣದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 7,15,000 ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮೊಹಮ್ಮದ್ ಅಸ್ಗರ್ ಎಂಬಾತನ ವಿರುದ್ಧ ಈ ಹಿಂದೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಅಪಹರಣ, ಹಲ್ಲೆ ಪ್ರಕರಣ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ಹಾಗೂ ಬೆಂಗಳೂರು ನಗರದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟದ ಪ್ರಕರಣ ಹೀಗೆ ಒಟ್ಟು 8 ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿಗಳ ಹಾಗೂ ಅಕ್ರಮ ಪಿಸ್ತೂಲ್ ಪತ್ತೆ ಕಾರ್ಯವನ್ನು ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಗೀತಾ ಕುಲಕರ್ಣಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐಯವರಾದ ಸುದೀಪ್ ಎಂ ವಿ ನೇತೃತ್ವದಲ್ಲಿ ನಡೆಸಲಾಗಿದೆ. ಸಿಸಿಬಿ ಸಿಬಂದಿಗಳು ಪಾಲ್ಗೊಂಡಿದ್ದರು.