BELTHANGADI
ಯೂಟ್ಯೂಬರ್ ಸಮೀರ್ ಎಂ ಡಿ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ ಜುಲೈ 12: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐ ಆಧಾರಿತ ಯೂಟ್ಯೂಬ್ ವಿಡಿಯೋ ಮಾಡಿದ ಯೂಟ್ಯೂಬರ್ ಸಮೀರ್ ಎಂ ಡಿ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ರಿ ಪ್ರಕರಣದಲ್ಲಿ ಸಾಕ್ಷಿ ದೂರುದಾರರು ತನ್ನ ದೂರಿನಲ್ಲಿ ಹಾಗೂ ಮಾನ್ಯ ನ್ಯಾಯಾಲಯದ ಮುಂದೆ ಬಹಿರಂಗಪಡಿಸಿರುವ ಮಾಹಿತಿಗಳನ್ನು ಹೊರತುಪಡಿಸಿ, ಸಾಕ್ಷಿ ದೂರುದಾರರ ಬಗ್ಗೆ ಹಾಗೂ ಪ್ರಕರಣದ ಬಗ್ಗೆ ಇತರೆ ಹೆಚ್ಚಿನ ಮಾಹಿತಿಗಳನ್ನು ಒಳಗೊಂಡಿರುವ ಕಾಲ್ಪನಿಕವಾಗಿ (AI) ಸೃಷ್ಟಿಸಲಾದ, ಸುಳ್ಳು ಮಾಹಿತಿಗಳನ್ನೊಳಗೊಂಡ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಿ, ಉದ್ದೇಶಪೂರ್ವಕವಾಗಿ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಮಾಡಿರುವ ಹಿನ್ನೆಲೆಯಲ್ಲಿ ಸಮೀರ್ ಎಂ.ಡಿ ಎಂಬ ಯೂಟ್ಯೂಬರ್ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿಅ.ಕ್ರ : 42/2025 ಕಲಂ: 192, 240, 353(1)(b) bNS ರಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೆ ಧರ್ಮಸ್ಥಳ ಪೊಲೀಸ್ ಠಾಣಾ 39/2025 ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ದಿನ ದಿನಾಂಕ 11.07.2025 ರಂದು ಒಂದು ಪ್ರಕರಣ ದಾಖಲಾಗಿದ್ದು, ಎರಡು ಪ್ರತ್ಯೇಕ ವಿಚಾರಣೆಗಳನ್ನೂ ಪ್ರಾರಂಭಿಸಲಾಗಿರುತ್ತದೆ.
ದಿನಾಂಕ 11.07.2025 ರಂದು ಸಾಕ್ಷಿ ದೂರುದಾರರ ಪರವಾದ ವಕೀಲರು ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಕೆಲವು ಹೇಳಿಕೆಗಳು ವಾಸ್ತವಿಕವಾಗಿ ತಪ್ಪಾಗಿದೆ ಎಂದು ಪೊಲೀಸರು ತಿಳಿಸಿದ್ದು, ಸದ್ರಿ ಪ್ರಕರಣದ ತನಿಖಾಧಿಕಾರಿಯನ್ನು ಬದಲಾಯಿಸಲು ಅಥವಾ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT)ವನ್ನು ರಚಿಸಲು ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಕೆಲವು ಗುಂಪನ್ನು ಪ್ರತಿನಿಧಿಸುತ್ತಿರುವ ವ್ಯಕ್ತಿಗಳು ಹೇಳುತ್ತಿದ್ದು, ಈ ಬಗ್ಗೆ ಸಾಕ್ಷಿ ದೂರುದಾರರ ಪರವಾದ ವಕೀಲರಿಗೆ ಅರಿವಿದೆಯೇ ಎಂಬುದನ್ನು ಹಾಗೂ ಈ ಬಗ್ಗೆ ಸಾಕ್ಷಿ ದೂರುದಾರರ ನಿಲುವೇನು ಎಂಬುದನ್ನು ದೃಢಪಡಿಸಿಕೊಳ್ಳಬೇಕಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.