LATEST NEWS
ಎಕ್ಸ್ ಖಾತೆಯಲ್ಲಿ ಇಸ್ಲಾಂ ವಿರುದ್ದ ಅವಹೇಳನ – ಬ್ರಹ್ಮಾವರದ ವೈದ್ಯರೊಬ್ಬರ ವಿರುದ್ದ ಪ್ರಕರಣ ದಾಖಲು
ಉಡುಪಿ ಜುಲೈ 15: ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮುಸ್ಲಿಂರ ವಿರುದ್ದ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ ಆರೋಪದ ಮೇಲೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಕೀರ್ತನ್ ಉಪಾಧ್ಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಾಗಿದೆ.
ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಉಪಾಧ್ಯ ‘ಲೋನ್ಲಿ ಸ್ಟ್ರೇಂಜರ್ (Lonely stranger)’ ಎಂಬ ಹ್ಯಾಂಡಲ್ ನ ಎಕ್ಸ್ ಖಾತೆಯನ್ನು ಹೊಂದಿದ್ದಾರೆ. ಜುಲೈ 13ರಂದು ಎಕ್ಸ್‌ನಲ್ಲಿ ‘ಅಭಿ ಆ್ಯಂಡ್ ನೀಯು’ ಖಾತೆಯಿಂದ ‘ಈ ಜಗತ್ತಿನಿಂದ ನೀವು ಏನಾದರೂ ಒಂದನ್ನು ಇಲ್ಲವಾಗಿಸಲು ಬಯಸುವುದಾದರೆ ಅದು ಯಾವುದು?’ ಎಂಬುದಾಗಿ ಪ್ರಶ್ನಿಸಲಾಗಿತ್ತು. ಅದಕ್ಕೆ ಡಾ.ಉಪಾಧ್ಯ ತಮ್ಮ ‘ಲೋನ್ಲಿ ಸ್ಟ್ರೇಂಜರ್’ ಹ್ಯಾಂಡಲ್ ನಿಂದ ‘ಮುಸ್ಲಿಂ ಕಮ್ಯುನಿಟಿ’ ಎಂದು ಉತ್ತರಿಸಿದ್ದರು. ಜಗತ್ತಿನಿಂದ ಮುಸ್ಲಿಂ ಸಮುದಾಯವನ್ನು ಇಲ್ಲವಾಗಿಸಲು ಬಯಸುತ್ತೇನೆ ಎಂಬ ಅರ್ಥ ನೀಡುವ ಡಾ. ಕೀರ್ತನ್ ಉಪಾಧ್ಯ ಅವರ ಈ ಕಮೆಂಟ್ ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಡಾ. ಕೀರ್ತನ್ ಉಪಾಧ್ಯ ಅವರ ಹೇಳಿಕೆಯ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡಾ. ಕೀರ್ತನ್ ಉಪಾಧ್ಯ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನರು ಕರ್ನಾಟಕ ಡಿಜಿಪಿ ಅವರನ್ನು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನ ಉಸ್ತುವಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿರುವ ಪೊಲೀಸ್ ಉಪನಿರೀಕ್ಷಕ(ನಿಸ್ತಂತು) ಅಜ್ಮಲ್ ಇಬ್ರಾಹಿಂ ಇ.ಎ. ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಡಾ. ಕೀರ್ತನ್ ಉಪಾಧ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 196, 353 ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಡಾ.ಉಪಾಧ್ಯ ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿ, ಮತ್ತೊಂದು ಟ್ವೀಟ್ ಮಾಡಿದ್ದು, ಅದರಲ್ಲಿ ಯಾರೋ ತನ್ನ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಈ ಸಂಬಂಧ ಡಾ.ಉಪಾಧ್ಯ ಯಾವುದೇ ಠಾಣೆಯಲ್ಲೂ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
You must be logged in to post a comment Login