ನ್ಯೂಸ್ ಚಾನೆಲ್ ಕಾರ್ಯಕ್ರಮದಲ್ಲಿ ನಿಮ್ಮ ಮತ ಯಾರಿಗೇ ಕೇಳಿದರೆ ಸುದ್ದಿ ವಾಹಿನಿ ವಿರುದ್ದ ಕಠಿಣ ಕ್ರಮ – ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಏಪ್ರಿಲ್ 3 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ವಿವಿಧ ಖಾಸಗಿ ಟಿವಿ ವಾಹಿನಿಗಳು, ಲೋಕಸಭಾ ಚುನಾವಣೆಯ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯುವ ಕಾರ್ಯಕ್ರಮ ನಡೆಸುತ್ತಿದ್ದು, ನಿಮ್ಮ ಮತ ಯಾರಿಗೆ? ಎಂದು ನೇರವಾಗಿ ಮತದಾರರನ್ನು ಪ್ರಶ್ನಿಸಿ ಅಭಿಪ್ರಾಯ ಸಂಗ್ರಹಿಸಿ ಪ್ರಸಾರ ಮಾಡುತ್ತಿದ್ದು, ಇದು ಚುನಾವಣಾ ಗೋಪ್ಯತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
ಈ ಹಿನ್ನೆಲೆಯಲ್ಲಿ ಇಂತಹ ಅಭಿಪ್ರಾಯ ಸಂಗ್ರಹಣೆ ನಡೆಸಿದರೆ ಸಂಬಂದಪಟ್ಟ ವಾಹಿನಿ ಹಾಗೂ ಸಾರ್ವಜನಿಕರ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಎಚ್ಚರಿಕೆ ನೀಡಿದ್ದಾರೆ.
ಅವರು ಬುಧವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಲೋಕಸಭಾ ಚುನಾವಣೆಯ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಸಮಿತಿ(ಎಂಸಿಎಂಸಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾರರು ತಮ್ಮ ಮತ ರಹಸ್ಯವನ್ನು ಬಯಲು ಮಾಡುವುದು ಕಳವಳಕಾರಿ. ಕೆಲವು ವಾಹಿನಿಗಳಲ್ಲಿ ಇದು ನೇರವಾಗಿ ಪ್ರಸಾರವಾಗುತ್ತಿದೆ. ಮುಕ್ತ, ನ್ಯಾಯ ಸಮ್ಮತ ಚುನಾವಣೆಗೆ ಪ್ರತಿಯೊಬ್ಬ ಅಭ್ಯರ್ಥಿಗೂ ಸಮಾನ ಅವಕಾಶ ನೀಡಲಾಗುತ್ತಿದ್ದು, ಯಾವುದೇ ಒಬ್ಬ ಅಭ್ಯರ್ಥಿ ಅಥವಾ ಪಕ್ಷದ ಪರವಾಗಿ ಅಭಿಪ್ರಾಯ ಸಂಗ್ರಹಣೆ ಹಾಗೂ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಸಂದರ್ಶನಗಳು ಸಂದರ್ಶನಗಳಾಗಿರಬೇಕೆ ಹೊರತು ಪ್ರಭಾವ ಬೀರುವಂತಿರಬಾರದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೆಲವು ಖಾಸಗಿ ಕಾರ್ಯಕ್ರಮಗಳ ಅಹ್ವಾನ ಪತ್ರಿಕೆಗಳಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ ಅವರ ಹೆಸರನ್ನು ಯಾವುದೇ ಅನುಮತಿ ಪಡೆಯದೇ ಮುದ್ರಿಸುತ್ತಿದ್ದು, ಸದ್ರಿ ಕಾರ್ಯಕ್ರಮ ಆಯೋಜಕರ ವಿರುದ್ದ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಎಂಸಿಎಂಸಿ ಸಮಿತಿ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್, ಎಂಸಿಎಂಸಿ ನೋಡೆಲ್ ಅಧಿಕಾರಿ ಶ್ರೀನಿವಾಸ ರಾವ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಮತ್ತು ಎಂಸಿಎಂಸಿ ಸದಸ್ಯರಾದ ವರದೇಶ್ ಹಿರೇಗಂಗೆ, ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕಿ ಉಷಾಲತಾ ಸರಪಾಡಿ ಉಪಸ್ಥಿತರಿದ್ದರು.