LATEST NEWS
ಪಾಕಿಸ್ತಾನದ ಮುಖವಾಡವನ್ನು ವಿಶ್ವಕ್ಕೆ ತಿಳಿಸುವ ಸರ್ವಪಕ್ಷ ನಿಯೋಗದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ

ಮಂಗಳೂರು ಮೇ 18:ಪಾಕಿಸ್ತಾನದ ಭಯೋತ್ಪಾದನೆ ಕುರಿತಂತೆ ಇಡೀ ವಿಶ್ವಕ್ಕೆ ತಿಳಿಸುವ ಹಿನ್ನಲೆ ಪ್ರದಾನಿ ಮೋದಿಯವರು ರಚಿಸಿರುವ ಸರ್ವಪಕ್ಷ ನಿಯೋಗದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಸ್ಥಾನಪಡೆದಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ, ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ವಿರುದ್ಧದ ಭಾರತದ ನಿರಂತರ ಹೋರಾಟವನ್ನು ಕೇಂದ್ರ ಸರ್ಕಾರ ಜಗತ್ತಿಗೆ ತಿಳಿಸುವ ತೀರ್ಮಾನ ಮಾಡಿದೆ. ಈ ಹಿನ್ನೆಲೆಯಲ್ಲಿ ಒಟ್ಟು ಏಳು ಸರ್ವಪಕ್ಷ ಸಂಸದೀಯ ನಿಯೋಗದ ರಚನೆ ಮಾಡಲಾಗಿದ್ದು, ಈ ನಿಯೋಗ ಜಗತ್ತಿನ ಒಟ್ಟು 32 ದೇಶಗಳಿಗೆ ಭೇಟಿ ನೀಡಿ ಪಾಕಿಸ್ತಾನದ ಮುಖವಾಡವನ್ನು ಬಿಚ್ಚಿಡಲಿದೆ.

ಅದರಂತೆ ಮೇ 23 (ಶುಕ್ರವಾರ) ರಿಂದ ಒಟ್ಟು ಏಳು ಸರ್ವಪಕ್ಷ ಸಂಸದೀಯ ನಿಯೋಗ ಜಗತ್ತಿನ ಹಲವು ದೇಶಗಳಿಗೆ ಭೇಟಿ ನೀಡಲಿದೆ. ವಿವಿಧ ಪಕ್ಷಗಳ ಒಟ್ಟು 51 ರಾಜಕೀಯ ನಾಯಕರು, ಸಂಸದರು, ಮಾಜಿ ಸಚಿವರು ಮತ್ತು 8 ಮಾಜಿ ರಾಯಭಾರಿಗಳು ಈ ನಿಯೋಗದಲ್ಲಿದ್ದು, ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ಮತ್ತು ಅದನ್ನು ಭಾರತ ಎದುರಿಸುತ್ತಿರುವ ರೀತಿಯನ್ನು ಜಾಗತಿಕ ವೇದಿಕೆಗೆ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾ.ಚೌಟ, ‘ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸಿಕ್ಕಿರುವ ಈ ಪ್ರಪ್ರಥಮ ಅವಕಾಶವು ನನ್ನ ಪಾಲಿಗೆ ಶ್ರೇಷ್ಠವಾದುದು. ಹೇಡಿತನದ ಭಯೋತ್ಪಾದಕ ದಾಳಿಗೆ ಆಪರೇಷನ್ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಂಡ ರೀತಿಯ ಬಗ್ಗೆ ಒಬ್ಬ ಯೋಧನಾಗಿ ನನಗೆ ಅಪಾರ ಹೆಮ್ಮೆಯಿದೆ. ಈ ಎಲ್ಲದರ ಹಿಂದಿನ ಶಕ್ತಿಯಾಗಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದ ಮತ್ತು ಧೈಯದ ಧ್ವನಿಯಾಗಲು ಈ ನಿಯೋಗದ ಭಾಗವಾಗಿ ಅವಕಾಶ ನೀಡಿದ್ದಕ್ಕಾಗಿ ನಾನು ಹೃತ್ತೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.
‘ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ-ಸಹಿಷ್ಣುತೆಯ ಸಂದೇಶ ಸಾರಲು ಮತ್ತು ನವಭಾರತವು ಯಾವ ರೀತಿ ಭಿನ್ನವಾಗಿದೆ ಹಾಗೂ ತನ್ನ ನಿಲುವಿಗೆ ಹೇಗೆ ಬದ್ಧವಾಗಿದೆ ಎಂಬುದನ್ನು ಜಗತ್ತಿಗೆ ಹಂಚಿಕೊಳ್ಳಲು ನಾನು ಈ ವೇದಿಕೆಯನ್ನು ಬಳಸಿಕೊಳ್ಳಲಿದ್ದೇನೆ’ ಎಂದು ತಿಳಿಸಿದ್ದಾರೆ.
ಕ್ಯಾ.ಚೌಟ ಅವರು ಸದಸ್ಯರಾಗಿರುವ ಡಿಎಂಕೆ ಸಂಸದೆ ಕನಿಮೋಳಿ ನೇತೃತ್ವದ ಎಂಟು ಮಂದಿ ಸಂಸದರ ನಿಯೋಗವು ರಷ್ಯಾ, ಸ್ಪೇನ್, ಗ್ರೀಸ್, ಸ್ಟೋವೇನಿಯಾ, ಲಾಟ್ವಿಯಾ ದೇಶಗಳಿಗೆ ಭೇಟಿ ನೀಡಲಿದೆ.