LATEST NEWS
ಉಳ್ಳಾಲ ಆಶ್ರಮವೊಂದರಲ್ಲಿ ಬಿ.ವೈ ವಿಜಯೇಂದ್ರ ಹುಟ್ಟುಹಬ್ಬ ಆಚರಣೆ

ಮಂಗಳೂರು ನವೆಂಬರ್ 5: ರಾಜ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ , ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರ ಹುಟ್ಟುಹಬ್ಬವನ್ನು ಮಂಗಳೂರಿನಲ್ಲಿ ಆಚರಿಸಲಾಯಿತು. ಮಂಗಳೂರು ಹೊರವಲಯದ ಉಳ್ಳಾಲ ಇಲ್ಲಿಗೆ ಸಮೀಪದ ಕುತ್ತಾರುಪದವು ಮಂಗಳ ಸೇವಾ ಸಮಿತಿಯ ಬಾಲ ಸಂರಕ್ಷಣಾ ಆಶ್ರಮದಲ್ಲಿ ಇಂದು ಬೆಳಿಗ್ಗೆ ಹುಟ್ಟುಹಬ್ಬ ಆಚರಿಸಿಕೊಂಡರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಉಪಚುನಾವಣೆ ನಡೆದ ಶಿರಾ ಕ್ಷೇತ್ರದಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದರು. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನೆಡ್ಡಾ ಅವರ ಸೂಚನೆಯಂತೆ ಮೈಸೂರಿನಿಂದ ಪಕ್ಷ ಸಂಘಟನೆ ಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ ಎಂದರು.

ಹುಟ್ಟುಹಬ್ಬ ಆಚರಿಸುವ ಉದ್ದೇಶವಿರಲಿಲ್ಲ, ಆದರೆ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಸರಳವಾಗಿ ಆಶ್ರಮದ ಮಕ್ಕಳ ಜತೆಗೆ ಆಚರಿಸಿದ್ದೇನೆ ಎಂದರು. ಆಶ್ರಮ ಸಂಘಟಕ ಅನಂತಕೃಷ್ಣ ಭಟ್, ಬಿಜೆಪಿ ಮುಖಂಡರುಗಳಾದ ಕಿಶೋರ್ ಕುಮಾರ್ ಪುತ್ತೂರು, ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ್ ಪಂಡಿತ್ ಹೌಸ್, ಗೋಪಾಲ್ ಕುತ್ತಾರ್, ರಾಜೀವ್ ಮೈಸೂರು ಇದ್ದರು.