LATEST NEWS
ಆಗುಂಭೆ ಘಾಟ್ ನಲ್ಲಿ ಬಸ್ ಸಂಚಾರ ಪುನರಾರಂಭ
ಆಗುಂಭೆ ಘಾಟ್ ನಲ್ಲಿ ಬಸ್ ಸಂಚಾರ ಪುನರಾರಂಭ
ಉಡುಪಿ ಜೂನ್ 30: ಕರಾವಳಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೂ ಕುಸಿತ ಉಂಟಾಗಿದ್ದ ಆಗುಂಭೆ ಘಾಟ್ ನಲ್ಲಿ ಇಂದಿನಿಂದ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಭೂ ಕುಸಿತದಿಂದಾಗಿ ಆಗುಂಬೆ ಘಾಟ್ ನಲ್ಲಿ ಕಳೆದೆರಡು ದಿನಗಳ ಹಿಂದೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು.
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಆಗುಂಬೆ ಘಾಟ್ ನ 7 ನೇ ತಿರುವಿನಲ್ಲಿ ಭೂ ಕುಸಿತ ಉಂಟಾಗಿತ್ತು. ಇದರಿಂದ ರಸ್ತೆ ಕುಸಿದು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಅಲ್ಲದೇ ಜಿಲ್ಲಾಡಳಿತ ಈ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿತ್ತು.
ಕಳೆದ ಎರಡು ದಿನಗಳಿಂದ ಘನವಾಹನ ಸೇರಿದಂತೆ ಬಸ್ ಗಳ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಈಗ ಭೂ ಕುಸಿತ ಉಂಟಾಗಿದ್ದ ಪ್ರದೇಶದಲ್ಲಿ ತಾತ್ಕಾಲಿಕ ದುರಸ್ಥಿ ಕಾರ್ಯ ನಡೆಸಿದ್ದು ಬಸ್ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಉಡುಪಿಯಿಂದ ಶಿವಮೊಗ್ಗ- ಚಿಕ್ಕಮಗಳೂರು ಮಾರ್ಗವಾಗಿ ಬಸ್ ಓಡಾಟ ಶುರುವಾಗಲಿದೆ.
ಆಗುಂಬೆ ಘಾಟ್ ನಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆದಿದ್ದು ಮರಳು ಚೀಲ, ಕಾಂಕ್ರೀಟ್ ಜಲ್ಲಿ ಪುಡಿ ಹಾಕಲಾಗಿದೆ. ಲಾರಿ, ಟಿಪ್ಪರ್ ನಂಥ ಭಾರೀ ವಾಹನಗಳ ಸಂಚಾರ ನಿಷೇಧ ಮುಂದುವರೆದಿದ್ದು, ಬಸ್ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.
ಇನ್ನೂ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು, ಸತತ 2 ದಿನಗಳಿಂದ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ನದಿ ತೀರದ ಜನರು ದೋಣಿ ಬಳಸಿ ಸಂಚಾರ ಮಾಡುತ್ತಿದ್ದಾರೆ. ಇತ್ತ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುಂಜಾಗೃತೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಉಡುಪಿ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು ದಿನಪೂರ್ತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.