LATEST NEWS
ಕಾರಿನಲ್ಲಿ ಹೊಟ್ಟೆ ಕೊಯ್ದುಕೊಂಡು ಬಿಲ್ಡರ್ ಆತ್ಮಹತ್ಯೆ
ಕಾರಿನಲ್ಲಿ ಹೊಟ್ಟೆ ಕೊಯ್ದುಕೊಂಡು ಬಿಲ್ಡರ್ ಆತ್ಮಹತ್ಯೆ
ಉಡುಪಿ ಸೆಪ್ಟೆಂಬರ್ 24: ಸ್ವಂತ ಕಾರಿನಲ್ಲಿ ಚಾಕುವಿನಿಂದ ಹೊಟ್ಟೆ ಕೊಯ್ದುಕೊಂಡು ಬಿಲ್ಡರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಆಲಿವೆರಾ ಲೂಯೀಸ್ ಎಂದು ಗುರುತಿಸಲಾಗಿದೆ. ಭಾನುವಾರ ತಡರಾತ್ರಿ ಮಣಿಪಾಲದ ಪೆರಂಪಳ್ಳಿಯ ಸಂಬಂಧಿಕರ ಮನೆಯ ಸಮೀಪ ತಮ್ಮ ಫೋರ್ಡ್ ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲೂಯಿಸ್ ಮೊದಲು ತಮ್ಮ ಕೈಗೆ ಚಾಕುವಿನಿಂದ ಕೊಯ್ದುಕೊಂಡು, ನಂತರ ಹೊಟ್ಟೆಗೆ ಇರಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಪತ್ನಿಗೆ ಡೆತ್ನೋಟ್ ಬರೆದಿರುವ ಲೂಯಿಸ್, ನನ್ನ ಸಾವಿಗೆ ನಾನೇ ಕಾರಣ. ಮಕ್ಕಳನ್ನು ಚೆನ್ನಾಗಿ ನೋಡಿಕೋ. ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ ಎಂದು ಬರೆದಿದ್ದಾರೆ.
ಲೂಯೀಸ್ ಇದಕ್ಕೂ ಮೊದಲು ಖಾಸಗಿ ಶಿಪ್ ನಲ್ಲಿ ಕ್ಯಾಪ್ಟನ್ ಆಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಆರ್ಥಿಕವಾಗಿ ಸದೃಢವಾಗಿದ್ದರು. ಕಳೆದ ತಡರಾತ್ರಿ ಘಟನೆ ನಡೆದಿರುವ ಸಾಧ್ಯತೆಯಿದ್ದು, ಮೃತದೇಹ ಸಂಪೂರ್ಣ ಮರಗಟ್ಟಿದೆ. ಸ್ಥಳದಲ್ಲಿ ಚಾಕು ಸಹ ಸಿಕ್ಕಿದೆ. ಮಣಿಪಾಲ ವೈದ್ಯರು ಹಾಗೂ ಫೋರೆನ್ಸಿಕ್ ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರ್ಗಿ, ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡುಬರುತ್ತಿದೆ. ಆದರೂ ಸಹ ಪ್ರಕರಣವನ್ನು ಎಲ್ಲಾ ದೃಷ್ಟಿಕೋನಗಳಿಂದಲೂ ತನಿಖೆ ಮಾಡಲಾಗುವುದು ಎಂದು ಎಸ್ ಪಿ ಲಕ್ಷ್ಮಣ ಬ. ನಿಂಬರ್ಗಿ ತಿಳಿಸಿದ್ದಾರೆ.