LATEST NEWS
ಸಿಬ್ಬಂದಿಗೆ ಸಂಬಳ, ಸಂಸ್ಥೆ ನಿರ್ವಹಣೆಗೆ ಭೂಮಿ ಮಾರಾಟಕ್ಕೆ ಮುಂದಾದ ಬಿಎಸ್ಎನ್ಎಲ್
ಮಂಗಳೂರು ಜೂನ್ 28: ಸಿಬ್ಬಂದಿಗೆ ಸಂಬಳ, ಸಂಸ್ಥೆಯ ನಿರ್ವಹಣೆ ಮತ್ತು 4ಜಿ ಅಪ್ಗ್ರೇಡ್ಗಾಗಿ ಬಿಎಸ್ಎನ್ಎಲ್ ಸಂಸ್ಥೆಯು ಮಂಗಳೂರಿನ ಕದ್ರಿಯಲ್ಲಿರುವ ಭೂಮಿ ಹಾಗೂ ಮೈಸೂರಿನಲ್ಲಿರುವ 14 ಆಸ್ತಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ಬಿಎಸ್ಎನ್ಎಲ್ ಕರ್ನಾಟಕ ಸರ್ಕಲ್ ಚೀಫ್ ಜನರಲ್ ಮ್ಯಾನೇಜರ್ ಉಜ್ವಲ್ ಗುಲ್ಹಾನೆ ತಿಳಿಸಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬ್ಬಂದಿಗೆ ವೇತನ ನೀಡುವುದು, ಸಂಸ್ಥೆಯನ್ನು ನಿರ್ವಹಣೆ ಮಾಡುವುದು ಮತ್ತು 4 ಜಿ ಅಪ್ಗ್ರೇಡ್ಗಾಗಿ ಹಣಕಾಸಿನ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಬಿಎಸ್ಎನ್ಎಲ್ ಉಪಯೋಗಿಸದೆ ಇರುವ ಭೂಮಿಯನ್ನು ಮಾರಲು ನಿರ್ಧರಿಸಿದೆ ಎಂದರು.
ನಗರದ ಕದ್ರಿ ಹಿಲ್ಸ್ ಪಾರ್ಕ್ ರೋಡ್ನ ಲ್ಯಾಂಡ್ ಪಾರ್ಸೆಲ್ ಸ್ಟೋರ್ ಯಾರ್ಡ್ 2 ಎಕ್ರೆ (8094 ಚ.ಮೀ) ಭೂಮಿಯನ್ನು ಮೀಸಲು ಬೆಲೆ 39 ಕೋಟಿಗೆ ಮಾರಾಟ ಮಾಡಲು ಉದ್ದೇಶಿಸಿದೆ. ಜುಲೈ 1ಕ್ಕೆ ಬಿಡ್ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಇದು ಮೊದಲ ಹಂತದ ಪ್ರಕ್ರಿಯೆಯಾಗಿದ್ದು, ಎರಡನೇ ಹಂತದಲ್ಲಿ ಎಕ್ಕೂರಿನಲ್ಲಿರುವ ಬಜಾಲ್ ಬಿಟಿಎಸ್ ಸೈಟ್ನ 30 ಸೆಂಟ್ಸ್, ಕುಂಜತ್ತೂರಿನ ಮೈಕ್ರೋವೇವ್ ಸ್ಟಾಪ್ ಕ್ವಾಟ್ರಸ್ ಕಾಂಪೌಂಡ್ನ 20592 ಚ. ಮೀ, ಬೋಳಾರದ ಟೆಲಿಪೋನ್ ಎಕ್ಸ್ ಚೇಂಜ್ ಕಾಂಪೌಂಡ್ನ 13 ಸೆಂಟ್ಸ್ ಮಾರಾಟ ಮಾಡಲಾಗುವುದು ಎಂದು ಹೇಳಿದರು.