ಶಿರಸಿ , ಏಪ್ರಿಲ್ 19: ಮೃತ ಪತ್ನಿಯ ಸಹೋದರಿಯೊಂದಿಗೆ ಎರಡನೇ ವಿವಾಹವಾಗಲು ಸಿದ್ಧತೆ ನಡೆಸಿದ್ದ ಇಲ್ಲಿನ ಖ್ಯಾತ ವೈದ್ಯರೊಬ್ಬರನ್ನು ಅವರ ನಿವಾಸದಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೆಹೆಚ್ಬಿ (KHB) ಕಾಲೋನಿಯಲ್ಲಿ ನಡೆದಿದೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.

ಹತ್ಯೆಯಾದವರನ್ನು 51 ವರ್ಷದ ಡಾ. ರಮೇಶ್ ಕಲಗುಟಕರ್ ಎಂದು ಗುರುತಿಸಲಾಗಿದೆ. ಇವರು ಶಿರಸಿಯ ಪ್ರತಿಷ್ಠಿತ ವೈದ್ಯರಲ್ಲೊಬ್ಬರಾಗಿದ್ದರು. ಎಂಟು ತಿಂಗಳ ಹಿಂದಷ್ಟೇ ಇವರ ಪತ್ನಿ ಅನಾರೋಗ್ಯದಿಂದ ನಿಧನರಾಗಿದ್ದರು. ಮೃತ ವೈದ್ಯರಿಗೆ ಇಬ್ಬರು ಪುತ್ರರಿದ್ದು, ಓರ್ವ ವೈದ್ಯನಾಗಿದ್ದರೆ ಮತ್ತೊಬ್ಬ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾನೆ.
ಡಾ. ರಮೇಶ್ ಅವರು ಏಪ್ರಿಲ್ 20, ಸೋಮವಾರದಂದು ತನ್ನ ಮೃತ ಪತ್ನಿಯ ಸಹೋದರಿಯನ್ನು ಎರಡನೇ ವಿವಾಹವಾಗಬೇಕಿತ್ತು. ಮದುವೆಗೆ ಕ್ಷಣಗಣನೆ ಆರಂಭವಾಗಿದ್ದರಿಂದ ಬ್ಯಾಂಕ್ನಿಂದ ಚಿನ್ನಾಭರಣಗಳನ್ನು ತಂದು ಮನೆಯಲ್ಲಿ ಇರಿಸಲಾಗಿತ್ತು. ಆದರೆ, ಭಾನುವಾರ ರಾತ್ರಿ ಮನೆಯೊಳಗೆ ನುಗ್ಗಿದ ಅಪರಿಚಿತರು ವೈದ್ಯರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಮನೆಯಲ್ಲಿದ್ದ ಆಭರಣಗಳಿಗಾಗಿ ಈ ಕೃತ್ಯ ನಡೆದಿದೆಯೇ ಅಥವಾ ಮದುವೆಯ ವಿಚಾರವಾಗಿ ಯಾರಾದರೂ ಈ ಕೃತ್ಯ ಎಸಗಿದ್ದಾರೆಯೇ ಎಂಬುದು ಇನ್ನು ನಿಗೂಢವಾಗಿದೆ. ಈ ಕುರಿತು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡಿದ್ದಾರೆ.
.