LATEST NEWS
ಜಿಎಸ್ ಟಿ ವಿಚಾರದಲ್ಲಿ ಮತ್ತೊಮ್ಮೆ ಟ್ರೋಲ್ ಆದ ನಿರ್ಮಲಾ ಸೀತಾರಾಮನ್
ಕೊಯಮತ್ತೂರು, ಸೆಪ್ಟೆಂಬರ್ 13: ಜಿಎಸ್ ಟಿ ವಿಚಾರದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ. ಕೇಂದ್ರ ಸರಕಾರದ ಜಿಎಸ್ ಟಿ ವಿರುದ್ದ ಈಗಾಗಲೇ ಸಾರ್ವಜನಿಕರು ಅಸಮಧಾನ ಹೊರಹಾಕುತ್ತಿರು ನಡುವೆ ಹೊಟೇಲ್ ಉದ್ಯಮಿಯೊಬ್ಬರು ಜಿಎಸ್ ಟಿಯ ಕಥೆಯನ್ನು ಬನ್ ಹಾಗೂ ಕ್ರೀಂ ಉದಾಹರಣೆಯೊಂದಿಗೆ ವಿವರಿಸಿದ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ಹೋಟೆಲ್ ಉದ್ಯಮಿ ಮತ್ತು ಕೊಯಮತ್ತೂರು ಜಿಲ್ಲಾ ಹೋಟೆಲ್ ಉದ್ಯಮಿಗಳ ಸಂಘದ ಅಧ್ಯಕ್ಷರೂ ಆಗಿರುವ ಡಿ ಶ್ರೀನಿವಾಸನ್ ಅವರು ಜಿಎಸ್ಟಿ ತೆರಿಗೆಯ ಸಂಕೀರ್ಣತೆ ತಿಳಿಸಲು ಕ್ರೀಮ್ ಬನ್ ಉದಾಹರಣೆ ನೀಡಿದರು.
‘ಮೇಡಮ್, ಬನ್ಗೆ ಜಿಎಸ್ಟಿ ಇಲ್ಲ. ಆದರೆ, ಅದೇ ಬನ್ಗೆ ಕ್ರೀಮ್ ಹಾಕಿ ಕ್ರೀಮ್ ಬನ್ ಆಗಿ ಮಾಡಿದರೆ ಅದಕ್ಕೆ ಶೇ. 12ರಷ್ಟು ಜಿಎಸ್ಟಿ ಆಗುತ್ತದೆ. ಗ್ರಾಹಕರು ನಮಗೆ ಬನ್ ಮತ್ತು ಕ್ರೀಮ್ ಸಪರೇಟ್ ಆಗಿ ಕೊಡಿ, ನಾವೇ ಕ್ರೀಮ್ ಬನ್ ಮಾಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ’ ಎಂದು ಶ್ರೀನಿವಾಸನ್ ಈ ವೇದಿಕೆಯಲ್ಲಿ ಹೇಳಿದ್ದರು. ಅವರ ಮಾತಿಗೆ ಸಭಾಂಗಣದಲ್ಲಿದ್ದವರೆಲ್ಲರೂ ಘೊಳ್ಳೆಂದು ನಕ್ಕರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಅಲ್ಲಿಯೇ ಇದ್ದರು.
ವಿವಿಧ ಜಿಎಸ್ಟಿ ದರಗಳು ಹೋಟೆಲ್ ಉದ್ಯಮಿಗಳಿಗೆ ತಲೆನೋವಾಗಿದೆ ಎನ್ನುವ ಸಂಗತಿಯನ್ನು ವಿವರಿಸುವ ಪ್ರಯತ್ನ ಡಿ ಶ್ರೀನಿವಾಸನ್ ಅವರಿಂದಾಯಿತು. ಹೋಟೆಲ್ಗೆ ಬರುವ ಕುಟುಂಬಗಳು ವಿವಿಧ ಆಹಾರವನ್ನು ಆರ್ಡರ್ ಮಾಡಿದಾಗ ಎಷ್ಟು ತೆರಿಗೆ ವಿಧಿಸಬೇಕು ಎಂದು ಲೆಕ್ಕ ಹಾಕಲು ಕಂಪ್ಯೂಟರ್ ಸಿಸ್ಟಂಗೂ ಕಷ್ಟವಾಗುತ್ತಿದೆ ಎಂದು ತಮಾಷೆ ಮಾಡಿದ ಶ್ರೀನಿವಾಸನ್, ಎಲ್ಲಾ ಆಹಾರವಸ್ತುಗಳಿಗೂ ಸಮಾನ ಜಿಎಸ್ಟಿ ತೆರಿಗೆ ವಿಧಿಸಬೇಕೆಂದು ಮನವಿ ಮಾಡಿದರು.