LATEST NEWS
ಮಂಗಳೂರಿನ ಲಕ್ಷದ್ವೀಪ ಜೆಟ್ಟಿ ಯೋಜನೆ ಕಾರ್ಯಗತಕ್ಕೆ ರಾಜ್ಯ ಸರಕಾರದಿಂದ ವಿಳಂಬ ನೀತಿ – ಲೋಕಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

ನವದೆಹಲಿ ಜುಲೈ 25: ಮಂಗಳೂರಿನ ಹಳೇ ಬಂದರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರತ್ಯೇಕ ಲಕ್ಷದ್ವೀಪ ಜೆಟ್ಟಿ ನಿರ್ಮಾಣ ಯೋಜನೆ ಮಂಜೂರಾತಿ ಪಡೆದು ಮೂರು ವರ್ಷ ಕಳೆದರೂ ಇನ್ನು ಕೂಡ ಪರಿಸರ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರದ ಹಲವು ಅಗತ್ಯ ಅನುಮತಿ ಬಾಕಿಯಿದ್ದು, ಈ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿರುವ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಬಂದರು ಸಚಿವ ಸರ್ಬಾನಂದ ಸೋನೋವಾಲ್ ಅವರ ಗಮನಸೆಳೆದಿದ್ದಾರೆ.
ಸಂಸತ್ತಿನಲ್ಲಿ ನಿಯಮ 377ರಡಿ ವಿಷಯ ಪ್ರಸ್ತಾಪಿಸಿರುವ ಕ್ಯಾ. ಚೌಟ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಸಾಗರಮಾಲಾ-1 ಯೋಜನೆಯಡಿ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಸರಕು ಸಾಗಣೆ ಹಾಗೂ ವ್ಯಾಪಾರ-ವಹಿವಾಟು ವೃದ್ಧಿಸುವ ಉದ್ದೇಶದಿಂದ ಮಂಗಳೂರಿನ ಹಳೇ ಬಂದರಿನಲ್ಲಿ ಪ್ರತ್ಯೇಕ ಲಕ್ಷದ್ವೀಪ ಜೆಟ್ಟಿ ನಿರ್ಮಾಣ ಯೋಜನೆ 2022 ಘೋಷಣೆಯಾಗಿತ್ತು. 2023ರಲ್ಲಿ ಟೆಂಡರ್ ಪ್ರಕ್ರಿಯೆ ಕೂಡ ನಡೆದಿತ್ತು. ಆದರೆ, ಆ ಬಳಿಕ ಈ ಯೋಜನೆ ಅನುಷ್ಠಾನಕ್ಕೆ ಬರುವಲ್ಲಿ ಯಾವುದೇ ಆಡಳಿತಾತ್ಮಕ ಕ್ರಮಗಳಾಗಿಲ್ಲ ಎಂದು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಎದುರಾಗಿರುವ ಆಡಳಿತಾತ್ಮಕ ವಿಳಂಬದ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗಿತ್ತು. ಅಲ್ಲದೆ ಕಳೆದ ಚಳಿಗಾಲದ ಅಧಿವೇಶನದಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಆ ನಂತರದಲ್ಲಿ ಕಳೆದ ಫೆಬ್ರವರಿಯಲ್ಲಿ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರದಿಂದ ಅನುಮತಿ ಪಡೆಯಲಾಯಿತು. ಟೆಂಡರ್ ಆಗಿ ಎರಡು ವರ್ಷಗಳ ಬಳಿಕ ಅನುಮತಿ ಸಿಕ್ಕಿರುವುದು, ಈ ಯೋಜನೆಯ ವಿಳಂಬವನ್ನು ಎತ್ತಿತೋರಿಸುತ್ತದೆ. ಇದಾದ ಬಳಿಕ ಕಳೆದ ತಿಂಗಳಷ್ಟೇ ರಾಜ್ಯದ ತಜ್ಞರ ಮೌಲ್ಯಮಾಪನ ಸಮಿತಿಯಿಂದ ಅನುಮೋದನೆ ಸಿಕ್ಕಿದೆ. ಆದರೆ, ಪರಿಸರ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರದ ಕಡೆಯಿಂದ ಅಗತ್ಯ ಅನುಮತಿ ಬಾಕಿಯಿರುವ ಕಾರಣ ಈ ಯೋಜನೆ ಅನುಷ್ಠಾನ ಪ್ರಕ್ರಿಯೆ ಮತ್ತಷ್ಟು ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಹಳೇ ಬಂದರಿನಲ್ಲಿ ಡ್ರೆಜ್ಜಿಂಗ್ ಕಾಮಗಾರಿ ಕೂಡ ಕಾಲ-ಕಾಲಕ್ಕೆ ಸರಿಯಾಗಿ ನಡೆಯದಿರುವುದರಿಂದ ಜೆಟ್ಟಿ ಕಾರ್ಯ-ಚಟುವಟಿಕೆಗಳಿಗೂ ಸಾಕಷ್ಟು ತೊಂದರೆ ಎದುರಾಗುತ್ತಿದೆ. ಈ ಡ್ರೆಜ್ಜಿಂಗ್ ಕಾಮಗಾರಿಯ ಗುತ್ತಿಗೆಯನ್ನು ಬಂದರು ಇಲಾಖೆಯು ಏಳು ವರ್ಷಗಳಿಗೆ ಏಜೆನ್ಸಿಯೊಂದಕ್ಕೆ ವಹಿಸಿದೆ. ಆದರೆ, ಈ ಏಜೆನ್ಸಿಯು ಸಮರ್ಪಕವಾಗಿ ಡ್ರೆಜ್ಜಿಂಗ್ ಮೂಲಕ ಜೆಟ್ಟಿಗಳ ಹೂಳೆತ್ತದ ಕಾರಣ ಪ್ರತಿ ಮುಂಗಾರು ಬಂದಾಗಲೂ ಇದೊಂದು ಪುನರಾವರ್ತಿತ ಸಮಸ್ಯೆಯಾಗಿ ಕಾಡುತ್ತಿದೆ. ಈ ಸಮಸ್ಯೆಯನ್ನು ಆದ್ಯತೆ ಮೇರೆಗೆ ಬಗೆಹರಿಸಲು ಹಳೇ ಬಂದರಿನ ಡ್ರೆಜ್ಜಿಂಗ್ ಕಾರ್ಯಕ್ಕೆ ಹೊಸ ಗುತ್ತಿಗೆ ನೀಡುವಂತೆ ಬಂದರು ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ನಿರಂತರ ಒತ್ತಾಯಿಸುತ್ತಿದೆ. ಆದರೆ ಇಲ್ಲಿವರೆಗೆ ಯಾವುದೇ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಕ್ಯಾ. ಚೌಟ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಹಿನ್ನಲೆಯಲ್ಲಿ ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗದ ಸಚಿವರಾದ ತಾವು ಕೂಡಲೇ ಮಂಗಳೂರು ಹಳೇ ಬಂದರಿನಲ್ಲಿ ಲಕ್ಷದೀಪ ಜೆಟ್ಟಿ ನಿರ್ಮಾಣ ಯೋಜನೆಗೆ ಎದುರಾಗಿರುವ ಅಡೆ-ತಡೆಗಳನ್ನು ನಿವಾರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಯೋಜನೆ ಅನುಷ್ಠಾನಕ್ಕೆ ಬಾಕಿಯಿರುವ ಅನುಮತಿಗಳನ್ನು ಮಂಜೂರು ಮಾಡಿಸುವ ಜತೆಗೆ ಪರಿಸರ ಇಲಾಖೆಯ ಒಪ್ಪಿಗೆ ಪಡೆಯುವುದಕ್ಕೂ ಹೆಚ್ಚಿನ ಗಮನಹರಿಸಬೇಕು. ದಕ್ಷಿಣ ಕನ್ನಡದ ಪಾಲಿಗೆ ಬಂದರು ಸರಕು ಸಾಗಣೆ ಹಾಗೂ ಲಕ್ಷದ್ವೀಪದ ಜತೆಗಿನ ವ್ಯಾಪಾರ-ವಹಿವಾಟು ವೃದ್ಧಿಸುವ ಈ ಮಹತ್ವಾಕಾಂಕ್ಷಿ ಯೋಜನೆಯು ಯಾವುದೇ ಕಾರಣ ಇಲಾಖೆಗಳ ವಿಳಂಬ ನೀತಿಯಿಂದಾಗಿ ಸೊರಗಬಾರದೆಂದು ಸಂಸದರು ಸದನದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾ.ಚೌಟ ಅವರು, ಮಂಗಳೂರು ಹಳೇ ಬಂದರಿನ ಲಕ್ಷದ್ವೀಪ ಜೆಟ್ಟಿ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರದ ವಿಳಂಬ ನೀತಿಯಿಂದಾಗಿ ಇನ್ನು ಕೂಡ ಚಾಲನೆ ಲಭಿಸಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಅಂದರೆ 2022ರ ಆಗಸ್ಟ್ ಹಾಗೂ ಡಿಸೆಂಬರ್‌ನಲ್ಲಿ ಈ ಯೋಜನೆಗೆ ಟೆಂಡರ್ ಕರೆಯಲಾಗಿತ್ತು. 2023ರ ಮಾರ್ಚ್‌ನಲ್ಲಿ ಗುತ್ತಿಗೆಯನ್ನು ಕೂಡ ವಹಿಸಲಾಗಿತ್ತು. ಆದರೆ, 2023ರ ಮೇಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಯೋಜನೆಯಲ್ಲಿ ಕಿಂಚಿತ್ತೂ ಬೆಳವಣಿಗೆ ಆಗಿಲ್ಲ. ಈ ಯೋಜನೆಗೆ ರಾಜ್ಯ ಸರ್ಕಾರದ ಕೆಲವು ಇಲಾಖೆಗಳ ಅನುಮತಿ ಇನ್ನೂ ಬಾಕಿಯಿದ್ದು, ಯಾವುದೇ ಪ್ರಗತಿ ಕಂಡುಬಂದಿಲ್ಲ. ಇತ್ತೀಚೆಗೆ ನಡೆದ ದಿಶಾ ಸಭೆಯಲ್ಲಿಯು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಜೊತೆಗೂಡಿ, ಹೂಳೆತ್ತುವಿಕೆ ಗುತ್ತಿಗೆ ಮತ್ತು ಲಕ್ಷದ್ವೀಪ ಜೆಟ್ಟಿ ಗುತ್ತಿಗೆಯ ವಿಷಯವನ್ನು ಪ್ರಸ್ತಾಪಿಸಿದ್ದೆ. ಅಲ್ಲದೇ ಈ ಯೋಜನೆಗಳ ತ್ವರಿತ ಪ್ರಾರಂಭಕ್ಕಾಗಿ ಒತ್ತಾಯಿಸಿದ್ದು, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ನಾವು ಈಗಾಗಲೇ ಎರಡು ವರ್ಷಗಳನ್ನು ಕಳೆದುಕೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದೆ. ಹೀಗಿರುವಾಗ, ಸಿದ್ದರಾಮಯ್ಯ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆ ಆರ್ಥಿಕ ಬೆಳವಣಿ ಉತ್ತೇಜಿಸುವ ಈ ಲಕ್ಷದ್ವೀಪ ಜೆಟ್ಟಿ ನಿರ್ಮಾಣದಂತ ಅಭಿವೃದ್ಧಿ ಯೋಜನೆಗಳಲ್ಲಿಯೂ ರಾಜಕೀಯ ಮಾಡದೆ ಆದಷ್ಟು ಬೇಗ ಅಗತ್ಯ ಅನುಮತಿಗಳನ್ನು ನೀಡುವ ಮೂಲಕ ಪ್ರಧಾನಮಂತ್ರಿ ಮೋದಿ ಅವರ ಸಾಗರಮಾಲಾದಂಥ ದೂರದೃಷ್ಟಿ ಯೋಜನೆಗಳ ಜಾರಿಗೆ ಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.