DAKSHINA KANNADA
ಉಪ್ಪಿನಂಗಡಿ ರಸ್ತೆ ಅಪಘಾತಕ್ಕೆ ಬಾಲಕ ಬಲಿ, ಮೂವರಿಗೆ ಗಂಭೀರ ಗಾಯ

ಉಪ್ಪಿನಂಗಡಿ, ನವೆಂಬರ್ 29: ಅತೀ ವೇಗದಿಂದ ಬಂದ ಲಾರಿಯೊಂದು ಅಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯೋರ್ವ ಮೃತಪಟ್ಟು, ಅಟೋ ರಿಕ್ಷಾ ಚಾಲಕ ಸಹಿತ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ ಬಳಿಯ ಮಠ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಹಿರ್ತಡ್ಕ ನಿವಾಸಿ ದಿ. ಅಶ್ರಫ್ ಎಂಬವರ ಪುತ್ರ, ಹಿರ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಅಲ್ತಾಫ್ (12) ಮೃತ ಬಾಲಕ. ರಿಕ್ಷಾದಲ್ಲಿದ್ದ ಈತನ ತಾಯಿ ಖತೀಜಮ್ಮ, ಅಣ್ಣ ಆಶಿಕ್ ಮತ್ತು ಅಟೋ ರಿಕ್ಷಾ ಚಾಲಕ ಹಿರ್ತಡ್ಕ ನಿವಾಸಿ ಸಿದ್ದೀಕ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಅಲ್ತಾಫ್‍ನ ತಾಯಿ ಮಂಗಳೂರಿನ ಬೆಂಗರೆ ನಿವಾಸಿಯಾಗಿದ್ದು, ತನ್ನ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದವರು ಇಂದು ಬಸ್ಸಿನಲ್ಲಿ ಉಪ್ಪಿನಂಗಡಿಗೆ ಬಂದು, ಬಳಿಕ ಅಟೋ ರಿಕ್ಷಾದಲ್ಲಿ ಹಿರ್ತಡ್ಕಕ್ಕೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಹಾಸನ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಲಾರಿ ಮಠ ಮಸೀದಿಯ ಬಳಿಯ ತಿರುವಿನಲ್ಲಿ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಅತೀ ವೇಗದಿಂದ ಬಂದು ಅಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಿಂದ ಅಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನಾ ಪಿ. ಕುಮಾರ್, ಸಂಚಾರಿ ಸಬ್ ಇನ್ಸ್ ಪೆಕ್ಟರ್ ರಾಮ ನಾಯ್ಕ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.