LATEST NEWS
ಜಿ.ಪಂ. ಸದಸ್ಯನ ಕಲ್ಲಿನ ಕೋರೆಯ ಗುಂಡಿಗೆ ಬಿದ್ದು ಬಾಲಕ ಸಾವು
ಜಿ.ಪಂ. ಸದಸ್ಯನ ಕಲ್ಲಿನ ಕೋರೆಯ ಗುಂಡಿಗೆ ಬಿದ್ದು ಬಾಲಕ ಸಾವು
ಮಂಗಳೂರು ಅಕ್ಟೋಬರ್ 26: ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್ ನಡೆಸುತ್ತಿದ್ದ ಎನ್ನಲಾದ ಕಲ್ಲಿನ ಕೋರೆಯ ಗುಂಡಿಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಮೂಡಬಿದಿರೆಯ ವೇಣೂರಿನ ಹೊಸಂಗಡಿ ಎಂಬಲ್ಲಿ ನಡೆದಿದೆ.
ಚಂಡಮಾರುತದ ಹಿನ್ನಲೆಯಲ್ಲಿ ನಿನ್ನೆ ಶಾಲೆಗೆ ರಜೆ ಇದ್ದ ಕಾರಣ ಹೊಸಂಗಡಿಯ ಪೇರಿ ನಿವಾಸಿ ರವಿ ಎನ್ನುವವರ ಪುತ್ರ ಅಭಿಷೇಕ್ (8) ಕಲ್ಲಿನ ಕೋರೆಯ ಗುಂಡಿಗೆ ಈಜಲು ತೆರಳಿದ್ದ. ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಅಭಿಷೇಕ್ ಸಾವಿಗೀಡಾಗಿದ್ದಾನೆ.
ಕಲ್ಲಿಗಾಗಿ ಭೂಮಿಯನ್ನು ಅಗೆದು ಬೃಹತ್ ಗಾತ್ರದ ಗುಂಡಿ ಮಾಡಲಾಗುತ್ತಿದ್ದು, ಬಳಿಕ ಆ ಗುಂಡಿಗಳನ್ನು ಹಾಗೆಯೇ ಬಿಟ್ಟು ಹೋಗುವ ಕಾರಣದಿಂದಾಗಿ ಇಂಥ ಸಾವುಗಳು ಸಂಭವಿಸುತ್ತಿದೆ.
ಈ ಹಿಂದೆಯೂ ಸಾಕಷ್ಟು ಮಕ್ಕಳು ಇಂಥ ಕೋರೆಯ ಗುಂಡಿಗಳಿಗೆ ಬಿದ್ದು ಸಾವನ್ನಪ್ಪಿದ್ದು, ಆ ಬಳಿಕ ಬಳಕೆಯಲ್ಲಿಲ್ಲದ ಕೋರೆಯ ಗುಂಡಿಯ ಸುತ್ತ ಬೇಲಿ ನಿರ್ಮಿಸಬೇಕು ಇಲ್ಲವೇ ಆ ಗುಂಡಿಗಳನ್ನು ಮುಚ್ಚಬೇಕು ಎನ್ನುವ ಕಟ್ಟುನಿಟ್ಟಿನ ಆದೇಶವನ್ನೂ ಮಾಡಲಾಗಿತ್ತು.
ಆದರೆ ಕಲ್ಲಿನ ಕೋರೆ ನಡೆಸುವ ಮಾಫಿಯಾಗಳ ಬೇಜಾವಬ್ದಾರಿಯಿಂದಾಗಿ ಪುಟಾಣಿಗಳು ಬಲಿಯಾಗುತ್ತಿದ್ದಾರೆ.
ಮೂಡಬಿದಿರೆಯ ಹೊಸಂಗಡಿಯಲ್ಲಿ ಕೊರೆದಿರುವ ಕೋರೆ ಜಿಲ್ಲಾ ಪಂಚಾಯತ್ ಸದಸ್ಯ ದರಣೇಂದ್ರ ಕುಮಾರ್ ಗೆ ಸೇರಿದ್ದಾಗಿದ್ದು, ಬಾಲಕ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಪ್ರಕರಣವನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬರಲಾರಂಭಿಸಿದೆ.
ಕೋರೆಯ ಬದಲು ಕೆರೆಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ ಎಂದು ಪ್ರಕರಣವನ್ನು ತಿರುಚಲು ವೇಣೂರು ಪೋಲೀಸರ ಮೇಲೆ ಒತ್ತಡ ಹೇರಲಾಗುತ್ತಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.